'ಪಠ್ಯೇತರ ಚಟುವಟಿಕೆಯಿಂದಲೂ ಭವಿಷ್ಯ ವೃದ್ಧಿ'
ಸಾಗರ: ಪಠ್ಯವೊಂದೆ ಭವಿಷ್ಯದ ಮಾನದಂಡವಲ್ಲ. ಪಠ್ಯದ ಜೊತೆಗೆ ಕ್ರೀಡೆಯಂತಹ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಉದ್ಯೋಗ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ನೀವು ಯಶಸ್ಸು ಸಾಧಿಸಬಹುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ವಾಮಿ ಹೇಳಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪೈಕಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಒಂದು ಬಾರಿ ಸೋತ ಮಾತ್ರಕ್ಕೆ ಕ್ರೀಡೆಯಿಂದ ವಿಮುಖರಾಗಬಾರದು ಎಂದು ಸಲಹೆ ಮಾಡಿದರು. ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಯುವಜನ ಸೇವಾ ಕ್ರೀಡಾಧಿಕಾರಿ ಎಚ್.ಜಿ. ಸುಬ್ರಹ್ಮಣ್ಯ ಭಟ್, ದೈಹಿಕ ಶಿಕ್ಷಕರಾದ ಬೆಳ್ಳಿಯಪ್ಪ, ಇಂದೂಧರ್, ಸುನಿತಾ, ಎನ್.ಕೆ. ರಮೇಶ್, ಸುಬ್ರಹ್ಮಣ್ಯ, ಗುರುರಾಜ್ ಇನ್ನಿತರರು ಹಾಜರಿದ್ದರು.
--
ಕೃಷಿ ಕಾರ್ಮಿಕರ ಸಮಾವೇಶ ಇಂದು
ಶಿವಮೊಗ್ಗ: ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿ ಸಮಸ್ಯೆ ಬಗ್ಗೆ ಕಾಂಗ್ರೆಸ್ ಪಕ್ಷ ವಿಚಾರ ಸಂಕಿರಣ ಹಾಗೂ ಬಗರ್ ಹುಕುಂ ಸಾಗುವಳಿದಾರರು, ಕೃಷಿ ಕಾರ್ಮಿಕರ ಸಮಾವೇಶವನ್ನು ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ನ.11ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಿದ್ದು, ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಉದ್ಘಾಟಿಸಲಿದ್ದಾರೆ.
ಅರಣ್ಯ ಸಚಿವ ಬಿ. ರಮಾನಾಥ ರೈ, ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಭಾಗವಹಿಸುವರು. ಅಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಕರಿಯಣ್ಣ ವಿಷಯ ಮಂಡಿಸಲಿದ್ದಾರೆ.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಮುಖಂಡ ತೀ.ನಾ. ಶ್ರೀನಿವಾಸ್, ನಗರದ ಮಹದೇವಪ್ಪ, ಉಮಾಪತಿ, ಕೃಷ್ಣಪ್ಪ, ದಿವಾಕರ್, ಮಲ್ಲಯ್ಯ, ಧರ್ಮರಾಜ್, ರಾಜಣ್ಣ ಸೇರಿದಂತೆ ಹಲವರು ಇದ್ದರು.