'ಮೂಢನಂಬಿಕೆ ವಿರೋಧಿ ಮಸೂದೆ ಜಾರಿಯಾಗಲಿ'
ಶಿವಮೊಗ್ಗ: ಸಮಾಜವನ್ನು ಮೌಢ್ಯತೆಯತ್ತ ದೂಡುತ್ತಿರುವ ಮೂಢನಂಬಿಕೆಗಳ ಆಚರಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೂಢನಂಬಿಕೆ ವಿರೋಧಿ ಮಸೂದೆ ಜಾರಿಗೆ ಬರಲಿ ಎಂದು ಶಿವಮೊಗ್ಗದಲ್ಲಿ ನಡೆಯುತ್ತಿರುವ 3ನೇ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಮಸೂದೆಯಲ್ಲಿ ಯಾವುದೇ ಆಕ್ಷೇಪಾರ್ಹ ಸಂಗತಿಗಳಿದ್ದರೆ ಮಸೂದೆಯನ್ನು ತಿದ್ದುಪಡಿ ಮಾಡುವ ಅವಕಾಶ ಇದ್ದೇ ಇರುವುದರಿಂದ ಮಸೂದೆ ಜಾರಿಯಾಗುವ ಮೊದಲೇ ವಿರೋಧ ಸಲ್ಲ ಎಂದು ಸರ್ಕಾರಕ್ಕೆ ನಿರ್ಣಯವನ್ನು ತಲುಪಿಸಿ ಜಾರಿಗೊಳಿಸಲು ಒತ್ತಾಯಿಸುವ ತೀರ್ಮಾನಕ್ಕೆ ಬರಲಾಯಿತು. ನಿರ್ಣಯವನ್ನು ಚಿತ್ರದುರ್ಗ ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು, ಶಿವಮೊಗ್ಗ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಪಾಂಡುಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹಾಗೂ ಸಮ್ಮೇಳನಾಧ್ಯಕ್ಷ ಡಾ. ಎಸ್. ಆರ್. ಗುಂಜಾಳ ಅಂಗೀಕರಿಸಿದರು.
ಭಾಗವಹಿಸಿದ್ದ ಸಭಿಕರು ಮಸೂದೆ ಜಾರಿಯಾಗಲಿ ಜಾರಿಯಾಗಲಿ ಎಂದು ಧ್ವನಿಮತದಿಂದ ಬೆಂಬಲ ಸೂಚಿಸಿದರು.