ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಕ್ರಮ ನಿವೇಶನ ಹಕ್ಕುಪತ್ರ ವಿತರಣಾ ಜಾಲ

Rashmi Kasaragodu
Updated On : 12 Nov 2013, 11:26 am

ಹೊಸನಗರ: ತಾಲೂಕಿನಲ್ಲಿ ಅಕ್ರಮ ನಿವೇಶನ ಹಕ್ಕುಪತ್ರ ವಿತರಣಾ ಜಾಲ ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವಂತೆ ಮಾಜಿ ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.
ತಾಲೂಕಿನ ಮಳಲಿ ಗ್ರಾಮದಲ್ಲಿ ಸುಮಾರು 47 ನಿವೇಶನದ ಹಕ್ಕುಪತ್ರವನ್ನು ಅಕ್ರಮವಾಗಿ ನೀಡಲಾಗಿದೆ. 1991-92 ಸಾಲಿನ ಹಕ್ಕುಪತ್ರವನ್ನು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಲಾಗಿದೆ ಅಲ್ಲದೆ ಹಕ್ಕುಪತ್ರದ ಸ್ವೀಕೃತಿಯಲ್ಲಿ ಫಲಾನುಭವಿಗಳ ಸಹಿ ಇರುವುದಿಲ್ಲ ಮತ್ತು ಹಕ್ಕುಪತ್ರದಲ್ಲಿರುವ ತಹಸೀಲ್ದಾರ್ ಸಹಿ ಸೇರಿದಂತೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಅಲ್ಲದೆ ಹಕ್ಕುಪತ್ರಕ್ಕಾಗಿ ಫಲಾನುಭವಿಗಳಿಂದ ಹಣ ಹಣಪಡೆಯಲಾಗಿದ್ದು ಸುಮಾರು 5 ಲಕ್ಷಕ್ಕೂ ಹೆಚ್ಚು ಹಣವನ್ನು ಎತ್ತುವಳಿ ಮಾಡಲಾಗಿದೆ ಎಂದು ಆರೋಪಿಸಿದರು.
ಈಗಾಗಲೇ ನೀಡಲಾಗಿರುವ ಹಕ್ಕುಪತ್ರವನ್ನು ತಹಸೀಲ್ದಾರ್ ಸಿ.ಎಂ. ಕುಲಕರ್ಣಿಯವರ ಗಮನಕ್ಕೆ ತಂದು ಅವರು ಇದರ ಸತ್ಯಾಸತ್ಯತೆ ತಿಳಿಯಬೇಕಿದೆ. ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಂದ ಹಿಡಿದು ಯಾವುದೇ ಜನಪ್ರತಿನಿಧಿಗಳ ಕೈವಾಡವಿದ್ದರೆ ಬಯಲಿಗೆಳೆದು ಶಿಕ್ಷೆಗೆ ಒಳಪಡಿಸಬೇಕಾಗಿದೆ ಎಂದು ಆಗ್ರಹಿಸಿದರು. ಬಡವರಿಗೆ ನಿವೇಶನ ಹಕ್ಕುಪತ್ರ ನೀಡಬೇಕು. ಎಷ್ಟೇ ಸಾವಿರ ಹಕ್ಕುಪತ್ರ ನೀಡಿದರೂ ಅದಕ್ಕೆ ನಮ್ಮ ಬೆಂಬಲವಿದೆ. ಆದರೆ ಹಣಕ್ಕಾಗಿ ಬೋಗಸ್, ನಕಲಿ ಪತ್ರ ನೀಡಿರಬಹುದಾದ ಸಂಶಯಕ್ಕೆ ದಾರಿಯಾಗಿದೆ. ಮಾತ್ರವಲ್ಲ ತಾಲೂಕಿನಾದ್ಯಂತ ಈ ಜಾಲ ವಿಸ್ತರಣೆಯಾಗಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.ಪರಿಶೀಲಿಸಿ ಕ್ರಮ: ಹಕ್ಕುಪತ್ರದ ಸಂಖ್ಯೆ ಮತ್ತು ಕಡತದಲ್ಲಿರುವ ಸಂಖ್ಯೆಯಲ್ಲಿ ಸಾಮ್ಯತೆ ಇದೆ ಆದರೆ ಕೆಲವೊಂದು ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿದ್ದು, ದೂರು ಬಂದ ಮೇಲೆ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
 ಕಡತ ಮತ್ತು ಹಕ್ಕುಪತ್ರದ ಪರಾಮರ್ಶೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಕುಲಕರ್ಣಿ ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಪ್ರಮುಖರಾದ ನಿವಣೆ ಸೀತಾರಾಂ ಭಟ್, ಕೆ.ವಿ. ಕೃಷ್ಣಮೂರ್ತಿ, ಬಂಕ್ರೀಬೀಡು ಮಂಜುನಾಥ್, ವಡ್ಡಿನಬೈಲು ಸುಬ್ರಹ್ಮಣ್ಯ, ಚಕ್ರಾ ಸುಬ್ರಹ್ಮಣ್ಯ, ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement