ಜಾತಿ ಜಾತಿಯ ನಡುವೆ ಕಂದಕ ಸೃಷ್ಟಿಸದಿರಿ'
ಸಾಗರ: ಶಾದಿಭಾಗ್ಯ ಯೋಜನೆಯನ್ನು ಎಲ್ಲ ವರ್ಗದ ಹೆಣ್ಣುಮಕ್ಕಳಿಗೂ ವಿಸ್ತರಿಸುವಂತೆ ಒತ್ತಾಯಿಸಿ ಕರ್ನಾಟಕ ಜನತಾ ಪಕ್ಷದ ವತಿಯಿಂದ ಸೋಮವಾರ ಸಾಗರದಲ್ಲಿಯೂ ಪ್ರತಿಭಟನೆ ನಡೆಯಿತು.
ನಗರಸಭೆ ಎದುರು ಕೆಲಹೊತ್ತು ಧರಣಿ ನಡೆಸಿದ ಪಕ್ಷದ ಕಾರ್ಯಕರ್ತರು ನಂತರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಧರಣಿಯಲ್ಲಿ ಪಕ್ಷದ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರಲ್ಲದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ಇತರೆ ವರ್ಗದವರ ಮತವನ್ನು ಪಡೆದಿರಲಿಲ್ಲವೆ ಎಂದು ಪ್ರಶ್ನಿಸಿದರು.
ವ್ಯಾಪಕ ಭ್ರಷ್ಟಾಚಾರ: ಕಾಂಗ್ರೆಸ್ ಸರ್ಕಾರ ದಿವಾಳಿತನದ ಸೂಚಕವಾಗಿದ್ದು, ಯಾವುರ್ದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸಹದ್ಯೋಗಿಗಳು ನೀಡುವ ಭರವಸೆ ಹಾಗೂ ಘೋಷಣೆ ಪತ್ರಿಕೆಗಳಲ್ಲಿ ಮಾತ್ರ ಕಾಣುವಂತಾಗಿದೆ. ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಜಾರಿಗೆ ತಂದ ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದರು.
ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವುದು ಖಂಡನೀಯ ಎಂದ ಅವರು, ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ಜಾರಿಗೆ ತರಬಾರದು ಹಾಗೂ ಶಾದಿ ಭಾಗ್ಯ ಯೋಜನೆ ಎಲ್ಲಾ ವರ್ಗದ ಜನರಿಗೆ ತಲುಪುವ ಮಾಂಗಲ್ಯ ಭಾಗ್ಯ ಯೋಜನೆಯಾಗಿ ಪರಿವರ್ತನೆಯಾಗಬೇಕು. ಜೊತೆಗೆ ಎಪಿಎಲ್ ಕಾರ್ಡ್ದಾರರಿಗೂ ಪಡಿತರ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ಪ್ರಮುಖರಾದ ಕೆರೆಕೈ ಪ್ರಸನ್ನ, ವಿ. ಮಹೇಶ್, ವಾದಿರಾಜ್, ಕೆ.ಆರ್. ಗಣೇಶ ಪ್ರಸಾದ್, ರವಿ, ರತ್ನಾಕರ ಶೇಟ್, ಜಯಪ್ಪ ಗೌಡ, ರಾಮಣ್ಣ ಗಾಣಿಗ, ಸತೀಶ ಮೊಗವೀರ, ಪ್ರತಾಪ್, ಡಿ. ತುಕಾರಾಮ, ಐ.ವಿ. ಹೆಗಡೆ, ರಾಧಾಕೃಷ್ಣ ನಾಯಕ್ ಬೇಂಗ್ರೆ ಇನ್ನಿತರರು ಹಾಜರಿದ್ದರು.