ಶಾದಿ ಭಾಗ್ಯ ಎಲ್ಲಾ ವರ್ಗಕ್ಕೂ ವಿಸ್ತರಿಸಿ
ಕ.ಪ್ರ.ವಾರ್ತೆ ಶಿವಮೊಗ್ಗ ನ.11 ಶಾದಿ ಭಾಗ್ಯ ಯೋಜನೆಯನ್ನು ಎಲ್ಲಾ ವರ್ಗದವರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿ ಕೆಜೆಪಿ ಜಿಲ್ಲಾ ಘಟಕ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ನೆಹರು ರಸ್ತೆ, ಮಹಾವೀರ ವೃತ್ತ ಮೂಲಕ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಂತರ ಧರಣಿ ನಡೆಸಲಾಯಿತು.
ಭಾವೈಕ್ಯತೆ ಒಡೆಯುವ ಹುನ್ನಾರ: ಶಾದಿ ಭಾಗ್ಯ ಯೋಜನೆಯನ್ನು ಕೇವಲ ಒಂದು ವರ್ಗಕ್ಕೆ ಮಾತ್ರ ಮೀಸಲಿಟ್ಟಿರುವುದು ಖಂಡನೀಯ. ಸಂವಿಧಾನಾತ್ಮಕವಾದ ಭಾರತದಲ್ಲಿ ಆಡಳಿತ ನಡೆಸುವ ಸರ್ಕಾರಗಳು ಎಲ್ಲಾ ನಾಗರೀಕರನ್ನು ಒಂದೇ ಭಾವನೆಯಲ್ಲಿ ಕಾಣುವುದನ್ನು ಬಿಟ್ಟು, ಜಾತಿ, ಧರ್ಮದ ಆಧಾರದಲ್ಲಿ ರಾಷ್ಟ್ರದ ಜನತೆಯನ್ನು ಒಡೆದು ಆಳುತ್ತಿರುವುದು ಸಂವಿಧಾನ ವಿರೋಧವಾಗಿದೆ. ಶಾದಿ ಭಾಗ್ಯ ಯೋಜನೆಯನ್ನು ಕೇವಲ ಅಲ್ಪಸಂಖ್ಯಾತರಿಗೆ, ಅದರಲ್ಲೂ ಮುಸ್ಲಿಂ ಮಹಿಳೆಯರಿಗೆ ಮೀಸಲಿಟ್ಟಿರುವುದು, ಜನರಲ್ಲಿರುವ ಭಾವೈಕ್ಯತೆಯನ್ನು ಒಡೆಯುವ ಹುನ್ನಾರವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಪಿಎಲ್ ಪಡಿತರ ಚೀಟಿದಾರರಿಗೆ ನೀಡುತ್ತಿದ್ದ ಪಡಿತರ ಅಕ್ಕಿ, ಗೋಧಿ, ಸಕ್ಕರೆ, ಸೀಮೆಎಣ್ಣೆಯನ್ನು ಈಗಿನ ಸರ್ಕಾರ ನಿಲ್ಲಿಸಿರುವುದೂ ಖಂಡನೀಯ. ಮಧ್ಯಮ ವರ್ಗದ ಜನತೆ ದಿನೇ, ದಿನೇ ಏರುತ್ತಿರುವ ಬೆಲೆಗಳಿಂದಾಗಿ ಜೀವನ ನಡೆಸುವುದು ದುಸ್ತರವಾಗಿದೆ.
ಇಂತಹ ಸಂದರ್ಭದಲ್ಲಿ ಅಕ್ಕಿ, ಗೋಧಿ ಸಕ್ಕರೆ, ಸೀಮೆಎಣ್ಣೆಯನ್ನು ನಿಲ್ಲಿಸಿರುವುದರಿಂದ ಜನತೆ ತೊಂದರೆಯಲ್ಲಿ ಸಿಲುಕ್ಕಿದ್ದಾರೆ. ಆದರಿಂದ ಸರ್ಕಾರ ಕೂಡಲೇ ಎಪಿಎಲ್ ಪಡಿತರ ಚೀಟಿದಾರರಿಗೂ ಪಡಿತರ ಪದಾರ್ಥಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜಕೀಯ ಗಿಮಿಕ್: ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಸ್. ರುದ್ರೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಹೋರಾಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೊಂದು ರಾಜಕೀಯ ಗಿಮಿಕ್ ಎಂದು ಬಣಿಸಿದ್ದಾರೆ. ಆದರೆ, ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ನಿಜವಾಗಿಯೂ ರಾಜಕೀಯ ಗಿಮಿಕ್ ಮಾಡುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಟಿಕೀಸಿದರಲ್ಲದೇ, ಹೋರಾಟವನ್ನು ರಾಜಕೀಯ ಗಿಮಿಕ್ ಎನ್ನುವುದಾದರೇ ರಾಜ್ಯದ ಜನತೆಗೆ ನ್ಯಾಯ ಒದಗಿಸುವವರು ಯಾರು ಎಂದು ಪ್ರಶ್ನಿಸಿದರು.
ಈ ಯೋಜನೆಯಲ್ಲಿ ಸರ್ಕಾರ ಮೀಸಲಿಟ್ಟಿರುವ ಹಣ ಕೇವಲ 5 ಕೋಟಿ ಮಾತ್ರ. ಇದು ಪ್ರತಿ ಕ್ಷೇತ್ರದಿಂದ 4-5 ಜನರಿಗೆ ಮಾತ್ರ ಸಿಗಲಿದೆ. ಆಗಾದರೆ ಉಳಿದವರು ಬಡವರಲ್ಲವೇ. ಆದರಿಂದ ಎಲ್ಲಾ ವರ್ಗದವರಿಗೂ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ನಗರಾಧ್ಯಕ್ಷ ಬಿಳಕಿ ಕೃಷ್ಣಮೂರ್ತಿ ಮಾತನಾಡಿ, ರಾಜ್ಯ ಸರ್ಕಾರ ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇವಲ ಮುಸ್ಲಿಂ ವರ್ಗಕ್ಕೆ ಮೀಸಲಾಗಿರುವ ಯೋಜನೆಯನ್ನು ಜಾರಿಗೆ ತಂದಿದೆ
. ಮಾಜಿ ಮುಖ್ಯಮಂತ್ರಿಯೊಬ್ಬರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದರೂ ಮುಖ್ಯಮಂತ್ರಿಗಳು ಸ್ಪಂದಿಸದಿರುವುದು ವಿಪರ್ಯಾಸ. ಕೂಡಲೇ ಎಲ್ಲಾ ವರ್ಗದವರಿಗೂ ಯೋಜನೆ ವಿಸ್ತರಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಉಪಾಧ್ಯಕ್ಷ ತನ್ವೀರ್ ಅಹಮದ್, ಬಿ. ಏಸುದಾಸ್, ಕೆಜೆಪಿ ರಾಜ್ಯ ಸಮಿತಿ ಸದಸ್ಯ ಕೆ.ಪಿ. ಪುರುಷೋತ್ತಮ್, ಕೆಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಹೊನ್ನಪ್ಪ, ಬಳ್ಳೆಕೆರೆ ಸಂತೋಷ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ವೀರಭದ್ರ ಪೂಜಾರ್, ನಗರ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಶೇಖರ್, ಅನಿತಾ ರವಿಶಂಕರ್, ಸುಮಿತ್ರ, ನಗರಸಭೆ ಸದಸ್ಯ ಸತೀಶ್, ಮಾಲತೇಶ್, ಅರ್ಚನಾ ಬಳ್ಳೆಕೆರೆ, ಗೌರಿ ಶ್ರೀನಾಥ್, ಯುವ ಘಟಕದ ಅಧ್ಯಕ್ಷ ರುದ್ರೇಶ್, ಭಾನುಪ್ರಸಾದ್, ಗ್ರಾಮಾಂತರ ಅಧ್ಯಕ್ಷ ಸದಾಶಿವಪ್ಪ ಗೌಡ, ಬಿ. ಎಚ್. ರಾಮಚಂದ್ರ, ಷಣ್ಮುಖಪ್ಪ ಮತ್ತಿತರರು ಇದ್ದರು.