ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಕ್ರಮೀಕರಣ ಸಮಿತಿ ರಚನೆಗೆ ಸುತ್ತೋಲೆ

Rashmi Kasaragodu
Updated On : 12 Nov 2013, 11:23 am

ಕ.ಪ್ರ.ವಾರ್ತೆ    ಶಿವಮೊಗ್ಗ    ನ. 11
ಬಗರ್ ಹುಕುಂ ಸಕ್ರಮೀಕರಣ ಸಮಿತಿಗಳನ್ನು ತಕ್ಷಣ ರಚನೆ ಮಾಡುವಂತೆ ಸುತ್ತೋಲೆ ಕಳುಹಿಸಿದ್ದೇನೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಹೇಳಿದ್ದು, 2014ರ ಏಪ್ರಿಲ್ ಒಳಗೆ ಫಾರಂ ನಂ.50 ಹಾಗೂ 53 ಅನ್ವಯ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದರು.
ಕಾಂಗ್ರೆಸ್ನಿಂದ ಕುಂಸಿಯಲ್ಲಿ ಆಯೋಜಿಸಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಗರ್ ಹುಕುಂ ಸಾಗುವಳಿದಾರರ, ಕೃಷಿ ಕಾರ್ಮಿಕರ ಬೃಹತ್ ಸಮಾವೇಶ ಉದ್ಘಾಟಿಸಿ, ಭೂ ನ್ಯಾಯಮಂಡಳಿಯಲ್ಲಿ ಹೂಡಲಾಗಿರುವ ಕೇಸುಗಳು ವಿಲೇ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚನೆಗೆ ಎಲ್ಲಾ ಸಿದ್ಧತೆ ಮಾಡಿದ್ದೇವೆ ಎಂದರು.
ಎಲ್ಲಾ ಜಿಲ್ಲಾ ಮಂತ್ರಿಗಳಿಗೂ ಸೂಚನೆ ಕೊಟ್ಟಿದ್ದೇವೆ. ಸಮಿತಿಗೆ ಶಾಸಕರು ಅಧ್ಯಕ್ಷರಾಗಿರುತ್ತಾರೆ. ಉಳಿದ ಸದಸ್ಯರರನ್ನು ತೀರ್ಮಾನ ಮಾಡಿ. ಆದರೆ ಸಮಿತಿ ಸಭೆಗೆ ಹೋಗಿ ಸುಮ್ಮನೆ ಕುಳಿತುಕೊಳ್ಳುವವರನ್ನ ಮಾಡಬೇಡಿ ಎಂದಿದ್ದೇನೆ. ಸಮಿತಿಗಳು ಸದ್ಯವೇ ರಚನೆಯಾಗುತ್ತವೆ ಎಂದರು.
ಉನ್ನತ ಸಮಿತಿ: ಸರ್ಕಾರಿ ಭೂಮಿ ಒತ್ತುವರಿ ಕುರಿತಂತೆ ಎರಡು ಸಮಿತಿಗಳನ್ನು ರಚಿಸಲಾಗಿತ್ತು. ಎ.ಟಿ. ರಾಮಸ್ವಾಮಿ ಸಮಿತಿ ಬೆಂಗಳೂರಿನಲ್ಲಿ 1 ಲಕ್ಷ ಎಕರೆ ಭೂಮಿ ಒತ್ತುವರಿ ಆಗಿದೆ ಎಂದಿತ್ತು. ಇದರಲ್ಲಿ ಈಗಾಗಲೇ 10 ಸಾವಿರ ಎಕರೆ ಭೂಮಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.  ಡಾ. ಬಾಲಸುಬ್ರಹ್ಮಣ್ಯ ಸಮಿತಿ ಇಡೀ ರಾಜ್ಯದಲ್ಲಿ 11 ಲಕ್ಷ ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿ ಮಾಡಿದೆ ಎಂದು ಹೇಳಿತ್ತು. ಈ ಹಿನ್ನಲೆಯಲ್ಲಿಯೇ ಭೂಕಂದಾಯ ಕಾಯ್ದೆಯ 192 ಎ ಕಲಂ ತಿದ್ದುಪಡಿ ಮಾಡಲಾಯಿತು ಎಂದರು. ಬಾಲಸುಬ್ರಹ್ಮಣ್ಯಂ ಸಮಿತಿ ವರದಿ ಅನುಷ್ಠಾನ ಕುರಿತಂತೆ ಪರಿಶೀಲನೆಗೆ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಒಂದು ಸಮಿತಿ ಇದೆ. ಇನ್ನೊಂದು ಉನ್ನತ ಮಟ್ಟದ ಸಮಿಯೊಂದನ್ನು ರಚಿಸಲಾಗುವುದು ಎಂದರು.
ಮತ್ತೊಮ್ಮೆ ವಿಸ್ತರಣೆ ಇಲ್ಲ; ಈಗಾಗಲೇ ಬಗರ್ ಹುಕುಂ ಸಕ್ರಮೀಕರಣಕ್ಕೆ ಎರಡು ಬಾರಿ ಅವಕಾಶ ಕೊಡಲಾಗಿದೆ. ಮತ್ತೆ ಮೂರನೇ ಬಾರಿ ಅವಕಾಶ ಕೊಡುವ ಸಾಧ್ಯತೆ ಇಲ್ಲ ಎಂದು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿದರು.
ಈ ಸಮಿತಿಗೆ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಅಧಿಕಾರೇತರ ಮೂವರು ಸದಸ್ಯರಿದ್ದು, ತಹಸೀಲ್ದಾರ್ ಕಾರ್ಯದರ್ಶಿ ಆಗಿರ್ತಾರೆ. ಅರ್ಜಿ ತಿರಸ್ಕೃತವಾಗಿದ್ದರೆ ಅದಕ್ಕೆ ಅಧಿಕಾರಿಗಳಲ್ಲ ನಾವೇ (ಶಾಸಕರೇ) ಕಾರಣ ಎಂದ ಅವರು, ಈ ಹಿಂದೆ ಎರಡು ಅವಕಾಶ ನೀಡಿದಾಗಲೂ ಅರ್ಜಿ ಸಲ್ಲಿಸದವರಿಗೆ ಮತ್ತೊಂದು ಅವಕಾಶವೇಕೆ ಎಂದಿದ್ದಾರೆ.
ಭೂಮಿ ಸಿಗದು: ದೊಡ್ಡ ಮಟದ ಅತಿಕ್ರಮಣ ಮಾಡಿದವರೂ ಇದ್ದಾರೆ. 50 ಎಕರೆ ಭೂಮಿ ಹೊಂದಿದವರು ಮತ್ತೆ 20 ಎಕರೆ ಒತ್ತುವರಿ ಮಾಡುವುದು ಏಕೆ ಇದನ್ನು ಬಿಡಿಸಿಕೊಳ್ಳುವುದು ಬೇಡವೇ ಎಂದು ಪ್ರಶ್ನಿಸಿದರು. ಈ ರೀತಿ ಮಾಡುತ್ತಾ ಹೋದರೆ ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಸಿಗುವುದಿಲ್ಲ ಎಂದರು. ಅರಣ್ಯ ಕಾಯ್ದೆ ಜಾರಿಗೆ ಬಂದಿದ್ದು ಸರಿಯಾಗಿಯೇ ಇದೆ. ಇಂದಿರಾ ಗಾಂಧಿ ಅವರು ಇಷ್ಟು ಕಠಿಣವಾದ ಕಾಯ್ದೆ ತರದಿದ್ದರೆ ಅರಣ್ಯಗಳೆಲ್ಲಾ ಮೈದಾನವಾಗುತ್ತಿದ್ದವು. ಇದರಿಂದ ಬಡ ರೈತರು ಸಮಸ್ಯೆಗೀಡಾಗಿದ್ದಾರೆ. ಇದನ್ನು ಬಗೆಹರಿಸಲು ಚರ್ಚೆ ನಡೆಯುತ್ತಿದೆ. ತಮ್ಮನ್ನೂ ಒಳಗೊಂಡಂತೆ ಸಂಪುಟ ಉಪಸಮಿತಿ ರಚನೆಯಾಗಿದೆ ಎಂದರು.
ಅಧಿಕಾರಿಗಳೊಂದಿಗೆ ಸಭೆ: ಸಂಜೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವರು ಕಂದಾಯ ಇಲಾಖೆ ಹಾಗೂ ಬಗರ್ ಹುಕುಂ ವಿಷಯಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದರು. ಇಲ್ಲಿಯೂ ಅವರು ಬಹುತೇಕ  ಕುಂಸಿಯಲ್ಲಿ ಪ್ರಸ್ತಾಪಿಸಿದ್ದ ವಿಷಯಗಳ ಬಗ್ಗೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಮ್ಮೆ ಅರಣ್ಯ ಜಮೀನು ಎಂದು ಅಧಿಸೂಚನೆ ಹೊರಟರೆ ಅದನ್ನು ಬದಲಿಸುವುದು ಅಸಾಧ್ಯ. ಈ ವಿಷಯ ನಮ್ಮ ಸರ್ಕಾರದ ಕೈಯಲ್ಲಿ ಇಲ್ಲ. ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.



 ಶಾಸಕಿ ಶಾರದ ಇಲ್ಯಾಕೆ ಬರ್ತಾರಂತೆ?

ಇದು ಕಾಂಗ್ರೆಸ್ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಯಾಕೆ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ್ ಬರ್ತಾರಂತೆ? ಅವರು ಬರುವುದಾದರೆ ನಾವು ಸ್ವಾಗತ ಮಾಡ್ತೀವಿ. ಕಾಂಗ್ರೆಸ್ ಸೇರೋದಾದ್ರೆ ಅರ್ಜಿ ಹಾಕಲಿ. ನಮ್ಮ ಅಧ್ಯಕ್ಷರು ಪರಿಶೀಲನೆ ಮಾಡ್ತಾರೆ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಹೇಳಿದರು. ತಮ್ಮನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ್ ಕುಂಸಿಯಲ್ಲಿ ಆಯೋಜಿಸಿದ್ದ ಬಗರ್ ಹುಕುಂ ಸಾಗುವಳಿದಾರರ ಸಮಾವೇಶದಲ್ಲಿ ಅವರು, ಶಾಸಕರಾದವರಿಗೆ ಸಾಮಾನ್ಯ ಜ್ಞಾನ ಇರಬೇಕು ಎಂದು ಟೀಕಿಸಿದರು. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ನಮ್ಮ ಪಕ್ಷದ ವೇದಿಕೆಗೆ ಅವರು ಯಾಕೆ ಬರೋಕೆ ಇಷ್ಟಪಡ್ತಾರೆ ಅಂತ ನನಗೆ ಗೊತ್ತಾಗಿಲ್ಲ. ಇದು ನೂರಕ್ಕೆ ನೂರು ಪಕ್ಷದ ಕಾರ್ಯಕ್ರಮ. ಇಲ್ಲಿಗೆ ಬರೋದಾದ್ರೆ ಮಾನದಂಡ ಏನು ಅಂತ ಹಿರಿಯ ಮುಖಂಡ ಕರಿಯಣ್ಣ ಅವರಿಗೇ ಕೇಳಬೇಕು ಎಂದರು. ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಸಹ ಶಾಸಕರ ನಿಲುವನ್ನು ಟೀಕಿಸಿದರು.


ಹೊಸ ತಾಲೂಕು ರಚನೆ ಜೀವಂತ
ರಾಜ್ಯದ್ಯಂತ 43 ಹೊಸ ತಾಲೂಕುಗಳ ರಚಿಸಬೇಕೆಂಬ ಈ ಹಿಂದಿನ ಸರ್ಕಾರದ ಕೈಗೊಂಡಿದ್ದ ತೀರ್ಮಾನ ಕೈಬಿಟ್ಟಿಲ್ಲ. ಇದನ್ನು  ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿದರು.  ನಗರದಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು, ಪ್ರತಿ ತಾಲೂಕು ರಚನೆಗೆ ಕನಿಷ್ಠ 5 ಕೋಟಿ ರು. ಅನುದಾನ ಅಗತ್ಯವಿರುವುದರಿಂದ ಸಂಪನ್ಮೂಲ ಕ್ರೋಡೀಕರಣದ ನಂತರ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಆಡಳಿತಾತ್ಮಕ ದೃಷ್ಟಿಯಿಂದ ಹೊಸ ತಲೂಕುಗಳ ರಚನೆ ಅಗತ್ಯವೂ ಇದೆ ಎಂದು ಅವರು ತಿಳಿಸಿದರು. ಇನ್ನಷ್ಟು ಹೊಸ ತಾಲೂಕುಗಳ ರಚನೆ ಸಾದ್ಯತೆಯೂ ಇಲ್ಲದಿಲ್ಲ. ಅನುದಾನ ಲಭ್ಯತೆಯ ಆಧಾರದ ಮೇಲೆ ತೀರ್ಮಾನ ಕೈಗಳ್ಳಲಾಗುವುದು ಎಂದರು. ಮನಸ್ವಿನಿ: ಗಂಡನಿಂದ ಪರಿತ್ಯಕ್ತಳಾದ ಮಹಿಳೆಗೆ ಮನಸ್ವಿನಿ ಯೋಜನೆಯ ಸೌಲಭ್ಯ ಕೊಡುವುದರೊಂದಿಗೆ ಅವರಿಗೆ ಕಡ್ಡಾಯವಾಗಿ ಬಿಪಿಎಲ್ ಪಡಿತರ ಚೀಟಿ ಹಾಗೂ ಆದ್ಯತೆಯ ಮೇಲೆ ಆಶ್ರಯ ಮನೆಗಳನ್ನು ನೀಡಲಾಗುವುದು ಎಂದು ಸಚಿವರು ಹೇಳಿದರು.
ಲ್ಯಾಂಡ್ ಬ್ಯಾಂಕ್: ಕೃಷಿಭೂಮಿ ಉಳಿಸಿಕೊಳ್ಳಬೇಕೆಂಬುದು ನಮ್ಮ ಮೊದಲ ಆದ್ಯತೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗಾಗಿ ಭೂಮಿ ವಶಪಡಿಸಿಕೊಳ್ಳುವ ವಿಷಯಕ್ಕೆ ಆದ್ಯತೆ ನೀಡುವುದಿಲ್ಲ ಎಂದು ಸಚಿವರು ತಿಳಿಸಿದರು. ಕೈಗಾರಿಕೆಗಳಿಗೆ ಭೂಮಿ ನೀಡುವ ಪ್ರಸ್ತಾವದ ಸಂದರ್ಭದಲ್ಲಿ ಆದಷ್ಟೂ ಪರಶೀಲಿಸಿ ಕ್ರಮಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement