16 ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಕ.ಪ್ರ.ವಾರ್ತೆ, ಸಾಗರ, ನ.12 ಬೆಂಗಳೂರಿನ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ಅನೇಕ ನಾರಾಯಣ ಜೋಶಿ ಚಾರಿಟಬಲ್ ಟ್ರಸ್ಟ್ ಹಾಗೂ ಬೆಳೆಯೂರಿನ ಮಹಾಗಣಪತಿ ಯಕ್ಷಗಾನ ಮಂಡಳಿ ಇವರ ಆಶ್ರಯದಲ್ಲಿ ನ. 16ರಂದು ಬಂದಗದ್ದೆಯ ಭಾರತಿ ಪ್ರೌಢಶಾಲೆಯಲ್ಲಿ ಮರೆಯಾಗುತ್ತಿರುವ ಕಲಾಪ್ರಕಾರಗಳು ಮತ್ತು ತಾಳಮದ್ದಲೆ ವಿಷಯ ಕುರಿತು ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಚಿಂತಕ ದೇವೇಂದ್ರ ಬೆಳೆಯೂರು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬೆಳಗ್ಗೆ 11ಕ್ಕೆ ಇತಿಹಾಸ ತಜ್ಞ ಷ. ಶೆಟ್ಟರ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ವಿ.ಆರ್. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ, ಅನೇಕ ನಾರಾಯಣ ಜೋಶಿ ಚಾರಿಟಬಲ್ ಟ್ರಸ್ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಸ್. ಜೋಶಿ ಉಪಸ್ಥಿತರಿದ್ದು, ಇದೇ ಸಂದರ್ಭದಲ್ಲಿ ಚಿಂತಕ ಶಂಕರ ಕೆ. ಶಾಸ್ತ್ರಿ ಅವರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಫೆಲೋಶಿಫ್ ನೀಡಿ ಗೌರವಿಸಲಾಗುವುದು ಎಂದರು.
ಬೆಳಗ್ಗೆ 11-30ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿರುವ ಗೋಷ್ಠಿಯಲ್ಲಿ ಮರೆಯಾಗುತ್ತಿರುವ ಕಲಾ ಪ್ರಕಾರಗಳು ಮತ್ತು ತಾಳಮದ್ದಲೆ ಕುರಿತು ಪ್ರಜ್ಞಾ ಮತ್ತಿಹಳ್ಳಿ, ತಾಳಮದ್ದಲೆಯ ಅನನ್ಯತೆ ಮತ್ತು ಶೈಕ್ಷಣಿಕ ಕ್ರಮ ವಿಷಯ ಕುರಿತು ವಿಠಲ ಭಂಡಾರಿ, ತಾಳಮದ್ದಲೆ ಕಲಾವಿದರು ಮತ್ತು ಎದುರಿಸುತ್ತಿರುವ ಸಮಸ್ಯೆ ಕುರಿತು ಶಂಕರ ಕೆ. ಶಾಸ್ತ್ರಿ ಪ್ರಬಂಧಮಂಡಿಸಲಿದ್ದಾರೆ.