ನೂರಕ್ಕೂ ಅಧಿಕ ಐಟಿಐ ತೆರೆಯಲು ಚಿಂತನೆ
ಸಾಗರ: ಕೈಗಾರಿಕೆ ಕುರಿತು ತರಬೇತಿ ನೀಡಲು ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಐಟಿಐಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ್ ಹೇಳಿದರು.
ತಾಲೂಕಿನ ಮಾಸೂರು ಸಮೀಪದ ಬಿಳೇಕಲ್ ಇಷ್ಟಾರ್ಥಸಿದ್ಧಿ ಕಲ್ಯಾಣಮಠದ ಚೌಡೇಶ್ವರಿ ಸೇವಾ ಟ್ರಸ್ಟ್ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಯುವಜನರು ಸ್ಥಳೀಯವಾಗಿಯೆ ಸ್ವಯಂ ಉದ್ಯೋಗ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬಹುಮುಖಿ ಕೌಶಲ್ಯ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಕೈಗಾರಿಕೆ ಅಭಿವೃದ್ಧಿ, ಹೊಸದಾಗಿ ಕೈಗಾರಿಕೆ ಸ್ಥಾಪನೆಗೆ ಅಗತ್ಯವಾದ ಎಲ್ಲಾ ಮಾಹಿತಿಗಳು ಇಲ್ಲಿ ಲಭ್ಯವಿರುತ್ತದೆ. ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಯೋಜನೆ ಚಾಲ್ತಿಯಲ್ಲಿದ್ದು, ಗುಲ್ಬರ್ಗ, ಬೆಳೆಗಾವಿ, ಹುಬ್ಬಳ್ಳಿ, ಮಂಗಳೂರು ಹಾಗೂ ಬಳ್ಳಾರಿಯಲ್ಲೂ ಘಟಕ ಆರಂಭಿಸಲಾಗುವುದು. ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ರಿಪ್ಪನಪೇಟೆಯಲ್ಲಿ ಐಟಿಐ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಮಿಕರು ಹಠಾತ್ತಾಗಿ ಮರಣ ಹೊಂದಿದಾಗ ನೋಂದಾಯಿತ ಕಾರ್ಮಿಕರಿಗೆ ಎರಡು ಲಕ್ಷ ಹಾಗೂ ಅಸಂಘಟಿತ ಕಾರ್ಮಿಕರಿಗೆ 50 ಸಾವಿರ ನೀಡಲಾಗುತ್ತಿದೆ.
ಈ ಪರಿಹಾರವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಮಿಕರ ಏಳಿಗಾಗಿ ಬಜೆಟ್ಟಿನಲ್ಲಿ ಹೆಚ್ಚಿನ ಹಣವನ್ನು ಮೀಸಲಿಟ್ಟಿದ್ದು, ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಚಟುವಟಿಕೆ ನಮ್ಮ ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.
ಜ್ಯೋತಿಷಿ ಕೊಟ್ರೇಶಯ್ಯ ಕಲ್ಯಾಣಮಠ, ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ್, ಕಾಂಗ್ರೆಸ್ ಮುಖಂಡ ರಮೇಶ್, ರತ್ನಾಕರ್, ರೇಣುಕಮ್ಮ ಇನ್ನಿತರರು ಹಾಜರಿದ್ದರು.