ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೇಲೇರದ ವಿಮಾನ, ಸಾರ್ವಜನಿಕರ ಅಸಮಾಧಾನ

Rashmi Kasaragodu
Updated On : 13 Nov 2013, 11:20 am

ಕ.ಪ್ರ.ವಾರ್ತೆ  ಶಿವಮೊಗ್ಗ  ನ.12 ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ 2012ರ ಡಿಸೆಂಬರ್ನಲ್ಲೇ ಮುಗಿಯಬೇಕಾಗಿತ್ತು, ಇಷ್ಟರಲ್ಲಾಗಲೇ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಬೇಕಾಗಿತ್ತು.
ಆದರೆ ನಿರೀಕ್ಷೆ ತಲೆಕೆಳಗಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪುನಾರಂಭಗೊಳ್ಳುವುದೇ ಅನುಮಾನ ಎಂಬಂತೆ  ಸಚಿವ ಸಂತೋಷ್ ಲಾಡ್ ಸೂಚನೆ ನೀಡಿದ್ದಾರೆ.
ಈ ಬೆಳವಣಿಗೆ ಜಿಲ್ಲೆಯ ಜನಪ್ರತಿನಿಧಿಗಳು, ಉದ್ಯಮಿಗಳು, ಸಾಮಾಜಿಕ ಕಳಕಳಿಹೊಂದಿದವರ ಕಳವಳಕ್ಕೆ ಕಾರಣವಾಗಿದ್ದು, ಸರ್ಕಾರದ ನಿಲವನ್ನು ಬದಲಿಸುವಂತೆ ಒತ್ತಾಯಿಸಿದ್ದಾರೆ. ಈ ಮಧ್ಯೆಯೇ ವಿಮಾನ ನಿಲ್ದಾಣ ಆಗಿಯೇ ತೀರುತ್ತದೆ ಎಂದು ಶಿವಮೊಗ್ಗ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಭರವಸೆ ಮಾತನಾಡಿದ್ದಾರೆ.
ಆಗಿದ್ದೇನು?: ಶಿವಮೊಗ್ಗದಿಂದಲೂ ವಿಮಾನ ಹಾರಾಟವಾಗಬೇಕೆಂಬುದು ಹಲವರ ಕನಸು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮುತುವರ್ಜಿಯಿಂದ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಎಲ್ಲಾ ವೇದಿಕೆ ಸೃಷ್ಟಿಸಿದರು.  ಅಗತ್ಯ ವ್ಯವಸ್ಥೆಗಳಾದವು. ಮಾಚೇನಹಳ್ಳಿ-ಕಾಚಿನಕಟ್ಟೆ ಮಧ್ಯಭಾಗದ ಭೂಮಿಯನ್ನು ವಶಕ್ಕೆ ಪಡೆಯಲಾಯಿತು.
ಒಟ್ಟು 758.38 ಎಕರೆ ಭೂಮಿಯನ್ನು ವಿಮಾನ ನಿಲ್ದಾಣಕ್ಕಾಗಿ ಗುರುತಿಸಿ, ಅಗತ್ಯವಾದಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಯಿತು. ಭೂಮಿ ಮಾಲೀಕರಿಗೆ ಪರಿಹಾರವನ್ನೂ ನೀಡಲಾಯಿತು.
ಆರಂಭದಲ್ಲಿ ಕಾಮಗಾರಿ ನಡೆಸುವ ಗುತ್ತಿಗೆ ಪಡೆದ ಸತ್ಯಂ ಕಂಪನಿಗೆ ಸೇರಿದ ಮೇಥಾಸ್ ಅರ್ಧದಲ್ಲೇ ಕೈಕೊಟ್ಟಿದ್ದರಿಂದ  ಹೈದರಾಬಾದ್ನ ಎಸ್.ರಾವ್. ಕನ್ಸ್ಟ್ರಕ್ಷನ್ಗೆ ಕಾಮಗಾರಿ ನಡೆಸುವ ಅವಕಾಶ ನೀಡಲಾಯಿತು.
ಸುಮಾರು 1500 ಮೀ. ರನ್ ವೇ ನಿರ್ಮಾಣದ ಬಳಿಕ ಕಾಮಗಾರಿ ಪರಿಶೀಲನೆಗೆ ಬಂದಿದ್ದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮಾಚೇನಹಳ್ಳಿ ಕೈಗಾರಿಕಾ ಪ್ರಾಂಗಣದಲ್ಲಿ ಎತ್ತರವಾಗಿರುವ ಕಟ್ಟಡಗಳು, ಕಾರ್ಖಾನೆಗಳ ಚಿಮಣಿ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡೂ ಕಡೆ ಬದಲಾಗಿ ಒಂದೇ ಕಡೆ ರನ್ವೇ ಮತ್ತು ಲ್ಯಾಂಡಿಂಗ್ಗೆ ಅವಕಾಶ ಮಾಡಿಕೊಡುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿತ್ತು. ಈ ಮಧ್ಯೆ ಅನುಮತಿ ಸಿಗುವವರೆಗೆ ಕಾಮಗಾರಿ ನಡೆಸುವುದು ಸಾಧ್ಯವಿಲ್ಲವೆಂದು ಗುತ್ತಿಗೆದಾರ ಕಂಪನಿ ಕಾಮಗಾರಿ ಸ್ಥಗಿತಗೊಳಿಸಿತು. ರಾಜ್ಯದ ಮನವಿಗೆ ಒಪ್ಪಿಗೆಯೇ ಸಿಗಲಿಲ್ಲ. ತಕ್ಕುದಾದ ಗಟ್ಟಿ ದನಿಯೂ ಸರ್ಕಾರದಲ್ಲಿ ಇಲ್ಲವಾಯಿತು. 1700 ಮೀ.ರನ್ ವೇಯಲ್ಲಿ ಈಗಾಗಲೇ 1500 ಮೀ.ಕಾಮಗಾರಿ ಮುಗಿದಿದೆ.
 ರನ್ವೇ ಮೆಟಲಿಂಗ್ ಹಾಗೂ ಡಾಂಬರ್ ಆಗಬೇಕಿದೆ. ಉಳಿದಂತೆ ಕಟ್ಟಡಗಳ ನಿರ್ಮಾಣವಾಗಬೇಕು. ಈಗಾಗಲೇ ಸುಮಾರು 40 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ.
 ಈ ಹಂತದಲ್ಲಿ ರನ್ ವೇ ದಿಕ್ಕು ಬದಲಿಸಬೇಕೆಂದರೆ ಮತ್ತೆ ಹತ್ತಾರು ಕೋಟಿ ರುಪಾಯಿ ವೆಚ್ಚವಾಗುತ್ತದೆ. ಇದೇ ಕಾರಣದಿಂದ ಅನುಮತಿ ನೀಡಲು ಹಿಂದೇಟು ಹಾಕಲಾಯಿತು ಎಂಬ ವಾದವೂ ಇದೆ. ರು. 240 ಕೋಟಿ ವೆಚ್ಚದ ಈ ಯೋಜನೆಯನ್ನು ಬಿಒಟಿ ಆಧಾರದ ಮೇಲೆ ರಿಜನಲ್ ಏರ್ಪೋರ್ಟ್ ಹೋಲ್ಡಿಂಗ್ಸ್  ಇಂಟರ್ ನ್ಯಾಷನಲ್ ಲಿಮಿಟೆಡ್ ಕೈಗೆತ್ತಿಕೊಂಡಿದ್ದು ಒಪ್ಪಂದದ ಪ್ರಕಾರ 2012ನೇ ಡಿಸೆಂಬರ್ಗೆ ಕಾಮಗಾರಿ ಮುಗಿಸಬೇಕಿತ್ತು.

 ಶ್ರೀಕಾಂತ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement