10 ಲಕ್ಷ ಮೌಲ್ಯದ 'ಅನ್ನಭಾಗ್ಯ' ಅಕ್ಕಿ ವಶ
ಶಿವಮೊಗ್ಗ: ಕಾಳಸಂತೆಗೆ ಹೊರಟಿದ್ದ ಅನ್ನಭಾಗ್ಯ ಯೋಜನೆಗೆ ಸೇರಿದ 10 ಲಕ್ಷ ಮೌಲ್ಯದ ಅಕ್ಕಿಯನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದು, ಗೋದಾಮು ಮಾಲಿಕ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ತಮಗೆ ಬಂದ ಖಚಿತ ಮಾಹಿತಿ ಆದರಿಸಿ ಸಂಜೆ 6.40ರ ವೇಳೆಗೆ ಖುದ್ದಾಗಿ ದಾಳಿ ನಡೆಸಿದರು. ನಂತರ ಡಿವೈಎಸ್ಪಿ ಶಿವಕುಮಾರ್, ತುಂಗಾ ಠಾಣೆಯ ಇನ್ಸ್ಪೆಕ್ಟರ್ ರವಿ ಮತ್ತು ತಂಡದವರು ಮುಂದಿನ ತನಿಖೆ ನಡೆಸಿ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡರು.
ಹೀಗಿತ್ತು ದಾಳಿ: ಎಸ್ಪಿಯವರಿಗೆ ಬಂದ ಮಾಹಿತಿಯಂತೆ ಈ ಖಾಸಗಿ ಗೋದಾಮಿನಿಂದ ಅನ್ನಭಾಗ್ಯ ಅಕ್ಕಿ ತುಂಬಿದ ಲಾರಿಯು ಮಂಗಳೂರಿನತ್ತ ಹೊರಟಿತ್ತು. ಇನ್ನೇನು ಹೊರಡಬೇಕೆಂಬಷ್ಟರಲ್ಲಿ ಪೊಲೀಸ್ ದಾಳಿ ನಡೆದಿತ್ತು. ನಂತರ ಬಂದ ಪೊಲೀಸರ ತಂಡ ಗೋದಾಮನ್ನು ಪರಿಶೀಲಿಸಿದಾಗ ಅವ್ಯವಹಾರದ ವ್ಯಾಪಕತೆ ಬಿಚ್ಚುಕೊಳ್ಳುತ್ತಾ ಹೋಯಿತು.
ಪಂಜಾಬ್ ಮತ್ತು ಹರಿಯಾಣದಿಂದ ಅನ್ನಭಾಗ್ಯ ಯೋಜನೆಗೆಂದು ತರಿಸಿಕೊಂಡ ಅಕ್ಕಿಯು ಇದಾಗಿತ್ತು. ಇಲ್ಲಿಂದ ಬೇರೆ ಚೀಲದಲ್ಲಿ ಅದು ಪ್ರತ್ಯೇಕ ಬ್ರ್ಯಾಂಡ್ನೊಂದಿಗೆ ಕಾಳಸಂತೆಗೆ ಹೋಗುತ್ತಿದ್ದವೆಂಬುದಕ್ಕೆ ಅಲ್ಲಿ ಸಾಕಷ್ಟು ನಿದರ್ಶನ ಸಿಕ್ಕವು. ಅಕ್ಕಿಯ ಜೊತೆಗೆ ಕೆಲವು ಚೀಲ ಗೋದಿ ಸಹ ಕಂಡುಬಂದಿದ್ದು, ಈ ಬಗ್ಗೆ ತನಿಖೆಯ ನಂತರವಷ್ಟೆ ಗೊತ್ತಾಗಬೇಕಾಗಿದೆ.
ಕ್ರಿಮಿನಲ್ ಕೇಸ್: ಒಟ್ಟಾರೆ 10 ಲಕ್ಷ ಮೌಲ್ಯ ಅಕ್ಕಿ. ಎರಡು ಲಾರಿ, ನಂಬರ್ ಪ್ಲೇಟ್ ಇಲ್ಲದ ಎರಡು ದ್ವಿಚಕ್ರ ವಾಹವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತಿದೆ ಎಂದು ಡಿವೈಎಸ್ಪಿ ಶಿವಕುಮಾರ್ ಮಾಹಿತಿ ನೀಡಿದರು.
ಗೋದಾಮು ಮಾಲಿಕರಾದ ಶ್ರೀನಿವಾಸ್ ಮತ್ತು ಕಾರ್ತಿಕ್ ಸೇರಿದಂತೆ ಆ ರು ಹಮಾಲಿಗಳನ್ನೂ ಸಹ ವಶಕ್ಕೆ ಪಡೆಯಲಾಗಿದೆ.
ಇತ್ತೀಚಿನ 2 ನೇ ಪ್ರಕರಣ: ಕಳೆದ ವಾರವಷ್ಟೇ ಶಿವಮೊಗ್ಗದ ಶಂಕರ್ ರೈಸ್ಮಿಲ್ನಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿ ಕಂಡುಬಂದಿತ್ತು. ಈ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಇಲ್ಲಿನ ಗಾಡಿಕೊಪ್ಪದ ಖಾಸಗಿ ಗೋದಾಮಿನಲ್ಲಿ ಅನ್ನಭಾಗ್ಯ ಯೋಜನೆಗೆ ಸೇರಿದ ದೊಡ್ಡ ಮಟ್ಟದ ಅಕ್ಕಿ ದಾಸ್ತಾನು ಸಿಕ್ಕಿದೆ.
ಇದು ನಮ್ಮ ಗೋದಾಮಿನಿಂದ ಪಡಿತರ ಅಂಗಡಿಗೆ ತಲುಪಿದ ಅಕ್ಕಿ ಎಂದು ಕೆಎಫ್ಸಿಎಸ್ಸಿ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಹಾಗಿದ್ದ ಮೇಲೆ ಕಾಳಸಂತೆಗೆ ಹೇಗೆ ಪ್ರವೇಶ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರೆ ತಲೆ ತಗ್ಗಿಸುತ್ತಾರೆ.
ನಾವು ಸರಿ ಇದ್ದೇವೆ: ಅಧಿಕಾರಿಗಳು ನೀಡುವ ವಿವರಣೆಯಂತೆ, ಎಫ್ಸಿಐ ಗೋದಾಮಿನಿಂದ ಅಕ್ಕಿ ಮತ್ತು ಸಾಮಗ್ರಿ ಕೆಎಫ್ಸಿಎಸ್ಸಿ ಗೋದಾಮಿಗೆ ಬರುತ್ತದೆ. ಈ ಪ್ರಕ್ರಿಯೆಯಲ್ಲಿ ಲೋಪವೆಲ್ಲಾಗುತ್ತದೆ ಎಂದು ಅಧಿಕಾರಿ ರುದ್ರೇಶ್ ಅವರನ್ನು ಪ್ರಶ್ನಿಸಿದರೆ, ನಾವು ಸರಿ ಇದ್ದೇವೆ. ನಮ್ಮ ಸಿಬ್ಬಂದಿ ಸರಿಯಾಗಿಯೇ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳುತ್ತಾರೆ.
ಪಂಜಾಬ್ ಮತ್ತು ಹರಿಯಾಣದಿಂದ ಅನ್ನಭಾಗ್ಯಕ್ಕಾಗಿ ಕೆಜಿಯೊಂದಕ್ಕೆ 23 ರು. ದರದಲ್ಲಿ ಖರೀದಿಸಿದ್ದ ಈ ಅಕ್ಕಿಯನ್ನು ಕೆಜಿಯೊಂದಕ್ಕೆ 45ರಂತೆ ಮಾರುಕಟ್ಟೆಗೆ ಬಿಡುಗಡೆಯಾಗಲು ಸಿದ್ಧತೆ ನಡೆದಿತ್ತು.
ಆಹಾರ ಇಲಾಖೆ ಹಿರಿಯ ಅಧಿಕಾರಿ ರಮೇಶ್ ಹೇಳುವ ಪ್ರಕಾರ, ಕೆಎಫ್ಸಿ ಗೋದಾಮಿನಿಂದ ಆಹಾರ ನಿರೀಕ್ಷಕರೇ ಖುದ್ದಾಗಿ ಅಕ್ಕಿಯನ್ನು ಪಡಿತರ ಅಂಗಡಿಗೆ ತಲುಪಿಸಿ ದಾಖಲೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಪಡಿತರ ಅಂಗಡಿಗೆ ತಲುಪುವ ಮುನ್ನವೇ ಅಕ್ಕಿ ಕಾಳಸಂತೆಗೆ ಹೋಗಿದೆ ಎಂಬ ಮಾತು ಸತ್ಯವಲ್ಲ. ನಂತರ ಹೋಗಿರಬಹುದು, ಅದು ನಮ್ಮ ಜವಾಬ್ದಾರಿಯಲ್ಲ ಎಂದು ಹೇಳುತ್ತಾರಾದರೂ, ಕೆಎಫ್ಸಿಯಲ್ಲಿರುವ ಭಾರೀ ಹೆಗ್ಗಣಗಳ ಹೊರತಾಗಿ ಇಷ್ಟುದೊಡ್ಡ ಮಟ್ಟದಲ್ಲಿ ಅಕ್ಕಿ ಕಳ್ಳತನ ಸಾಧ್ಯವೇ ಇಲ್ಲ.