ನೀರಿನಲ್ಲಿ ಮುಳುಗಿ ತಾಯಿ, ಮಗ ಸಾವು
ಸಾಗರ: ತಾಲೂಕಿನ ತಾಳಗುಪ್ಪ ಸಮೀಪದ ಶರಾವತಿ ಹಿನ್ನೀರಿನ ಪ್ರದೇಶವಾದ ಬೆಳ್ಳೆಣ್ಣೆಯಲ್ಲಿ ತಾಯಿ ಹಾಗೂ ಮಗ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಬೆಳ್ಳೆಣ್ಣೆ ಗ್ರಾಮದ ನಾಗರಾಜ ಎಂಬುವವರ ಪತ್ನಿ ಶರಾವತಿ (28) ಹಾಗೂ ಮಗ ಮನೋಜ್ (5) ಮೃತ ದುರ್ದೈವಿಗಳು. ನಾಗರಾಜ ಹಾಗೂ ಶರಾವತಿ ಕೂಲಿಕಾರ್ಮಿಕರಾಗಿದ್ದು ಇಬ್ಬರೂ ಪ್ರೇಮವಿವಾಹ ಮಾಡಿಕೊಂಡಿದ್ದರು. ಮನೆಯಲ್ಲಿ ಆಗಾಗ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಶರಾವತಿ ತನ್ನ ಸೀರೆ ಸೆರಗನ್ನು ಹರಿದು ಅದರಲ್ಲಿ ತನ್ನ ಹಾಗೂ ಮಗನ ಕೈಯನ್ನು ಗಟ್ಟಿಯಾಗಿ ಕಟ್ಟಿಕೊಂಡು ನೀರಿಗೆ ಹಾರಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಸ್ಥಳಕ್ಕೆ ಡಿವೈಎಸ್ಪಿ ಬಿ.ವಿ. ಸುರೇಶ್, ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಹೊನ್ನಪ್ಪ, ಪಿಎಸ್ಐ ಶಶಿಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲೆಗೆ ಹೋದ ವಿದ್ಯಾರ್ಥಿ ನಾಪತ್ತೆ
ಶಿವಮೊಗ್ಗ: ಶಾಲೆಗೆ ತೆರಳಿದ ವಿದ್ಯಾರ್ಥಿಯೋರ್ವ ಮನೆಗೆ ಹಿಂದಿರುಗದೆ ನಾಪತ್ತೆಯಾದ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಅಶೋಕನಗರದಲ್ಲಿ ನಡೆದಿದೆ. ವಂಶಿ (14) ನಾಪತ್ತೆಯಾದ ವಿದ್ಯಾರ್ಥಿ. ಈತ ಸಾಣೆಹಳ್ಳಿ ಶಾಲೆಗೆ ಹೋಗಿದ್ದು ನಂತರ ಶಾಲೆಗೂ ಹೋಗದೆ, ಮನೆಗೂ ಆಗಮಿಸದೆ ನಾಪತ್ತೆಯಾಗಿದ್ದಾನೆ. ಪ್ರಕರಣ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.