ಮಕ್ಕಳ ಗಣತಿ ಮನೆ ಸಮೀಕ್ಷೆಗೆ ಶಾಸಕರಿಂದ ಚಾಲನೆ
ಶಿವಮೊಗ್ಗ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ಮಕ್ಕಳ ಗಣತಿ ಕಾರ್ಯಕ್ರಮ ಮನೆಮನೆ ಸಮೀಕ್ಷೆಗೆ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನಗರದಲ್ಲಿ ಚಾಲನೆ ನೀಡಿದರು.
ಅಶೋಕನಗರ ಜನತಾ ಕಾಲೋನಿ 2ನೇ ಕ್ರಾಸ್ನಿಂದ ಮನೆಮನೆ ಸಮೀಕ್ಷೆ ಆರಂಭವಾಯಿತು. ನವೆಂಬರ್ 17ರವರೆಗೆ ಸಮೀಕ್ಷೆ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಜ್ಞಾವಂತ ಸಮಾಜದ ಪ್ರಮುಖ ಆಸ್ತಿ ವಿದ್ಯೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ, ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ತೀವ್ರವಾಗಿ ನಡೆಯುತ್ತಿದ್ದು, ಪೋಷಕರು ಸ್ಪಂದಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸರ್ವಶಿಕ್ಷಣ ಅಭಿಯಾನದ ಅಧಿಕಾರಿ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.