ಮೂಢ ನಂಬಿಕೆಗೆ ಊರು ಬಿಡುತ್ತಿವೆ 15 ಕುಟುಂಬ
ರವಿ ಬಿದನೂರು
ಹೊಸನಗರ: ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವುದನ್ನು ಬಿಟ್ಟು ಮೂಢನಂಬಿಕೆಗೆ ಜೋತು ಬಿದ್ದು ಭಯದಿಂದ ಗ್ರಾಮವನ್ನೆ ತೊರೆಯಲು ಮುಂದಾದ ವಿಚಿತ್ರ ಪ್ರಕರಣಕ್ಕೆ ಇಲ್ಲಿನ ಘಟನೆಯೊಂದು ಸಾಕ್ಷಿಯಾಗಿದೆ.
ತಾಲೂಕಿನ ನಗರ ಸಮೀಪದ ಸುಳುಗೋಡು ಗ್ರಾಮದಲ್ಲಿ 15 ಕುಟುಂಬಗಳ ವಾರದಿಂದ ಮೌಢ್ಯಕ್ಕೆ ಬೆದರಿ ವಾರದಿಂದ ಆಹಾರ ನಿದ್ದೆ ಇಲ್ಲದ ಬಳಲುತ್ತಿದ್ದು ಬದುಕನ್ನು ಅನಾವಶ್ಯಕವಾಗಿ ಆತಂಕಕ್ಕೆ ತಂದುಕೊಂಡಿದ್ದಾರೆ.
ಏನಿದು ಘಟನೆ:
ಸುಳುಗೋಡು ಗ್ರಾಮದ ಮುತ್ತ ಎಂಬುವರರ ಕುಟುಂಬಕ್ಕೆ ಸೇರಿದ ತೋಟದ ಪಕ್ಕದಲ್ಲಿ ಹಳೆ ಮರವಿದ್ದು ಅಡಿಕೆ ತೋಟಕ್ಕೆ ಬಿದ್ದು ಹಾನಿ ಮಾಡುವ ಸ್ಥಿತಿಯಲ್ಲಿತ್ತು. ಅದನ್ನು ತಪ್ಪಿಸಲು ಕಳೆದ ಗುರುವಾರದಂದು ಆ ಮರಕ್ಕೆ ಕೊಡಲಿ ಹಾಕಿದ್ದರು. ಮರ ಅಡಿಕೆ ತೋಟದತ್ತ ಬೀಳಬಾರದು ಎನ್ನುವ ಕಾರಣಕ್ಕೆ ಬಳ್ಳಿಯಿಂದ ಮತ್ತೊಂದು ದಿಕ್ಕಿನತ್ತ ಎಳೆದು ಕಟ್ಟಿದ್ದಾರೆ. ಆದರೆ ಮರ ಧರೆಗುಳಿಯಲು ಕ್ಷಣಗಣನೆ ಆರಂಭವಾಗಿತ್ತು. ಆ ಸಂದರ್ಭದಲ್ಲಿ ಮುತ್ತನ ಹೆಂಡತಿ ಮೈಮೇಲೆ ಬಂದಂತೆ ವಿಚಿತ್ರವಾಗಿ ಮಾತನಾಡಲು ಪ್ರಾರಂಭಿಸಿದಳೆಂದು ಕೆಲಸ ಅಲ್ಲಿಗೆ ಸ್ಥಗಿತಗೊಳಿಸಿದ್ದರು.
ಇನ್ನೇನು ಬೀಳಬೇಕಿದ್ದ ಮರ ಬಳ್ಳಿಯ ಆದಾರದ ಮೇಲೆ ನಿಂತಿದೆ. ಇಷ್ಟೆ ಆಗಿದ್ದರೆ ತೊಂದರೆ ಇರಲಿಲ್ಲ ಬದಲಿಗೆ ಮೂಢನಂಬಿಕೆಯ ಹೇಳಿಕೆಗಳಿಗೆ ಜೋತು ಬಿದ್ದ ಗ್ರಾಮಸ್ಥರು ತಾವೆ ಬಲಿಪಶುವಾಗತೊಡಗಿದ್ದಾರೆ.
ಮೈಮೇಲೆ ಬಂದಂತೆ ಮಾತನಾಡುವ ಮುತ್ತನ ಪತ್ನಿ ಕಥೆ ಹೇಳಲು ಶುರು ಮಾಡಿದ್ದಾಳೆ. ನಾನು ಕೇರಳದಿಂದ ಬಂದಿದ್ದೇನೆ ನೂರಾರು ವರ್ಷಗಳ ಹಿಂದೆ ಕೇರಳದ ಒಬ್ಬ ಮಾಂತ್ರಿಕ ನನ್ನನ್ನು ಬಲಿಕೊಟ್ಟಿದ್ದಾನೆ. ಆ ಮರದಲ್ಲಿ ನೆಲಸಿದ ನನಗೆ ಸಂಚಕಾರ ತಂದಿದ್ದೀರಿ. ಅಂದು ನನ್ನನ್ನು ಬಲಿಕೊಟ್ಟಂತೆ ಈಗ ನನಗು ನರಬಲಿ ಬೇಕಾಗಿದೆ ಎಂದು ಕಿರುಚಾಡುವುದು ಮಾತ್ರವಲ್ಲ ಅಲ್ಲಿರುವ ಕುಟುಂಬವನ್ನು ಬೆದರಿಸುವಂತ ಹೇಳಿಕೆ ನೀಡುತ್ತಿದ್ದಾರೆ.
ಚಿಕಿತ್ಸೆಗೆ ಹೋಗಿಲ್ಲ: ನಂಬಿಕೆ ಇರಬೇಕು ನಿಜ, ಆದರೆ ಮೂಢನಂಬಿಕೆ ಈ ಪರಿಯಾದರೆ ಹೇಳುವವರು ಕೇಳುವರು ಯಾರು ಎಂಬ ಪರಿಸ್ಥಿತಿಯಲ್ಲಿ ಕಂಡು ಬಂದಿದೆ. ಆಕೆಯ ಮಾತು ಕೇಳಿ ತಲೆಯಾಡಿಸುತ್ತಿರುವ ಗ್ರಾಮಸ್ಥರು ಈ ಮಹಿಳೆಗೆ ಚಿಕಿತ್ಸೆ ಕೊಡಿಸಲು ಮಾತ್ರ ಮುಂದೆ ಬಂದಿಲ್ಲ.
ಅದು ಬಿಟ್ಟು ವಾರದಿಂದ ಕೆಲಸಕ್ಕೆ ಹೋಗುತ್ತಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಬದಲಿಗೆ ಮೂಢನಂಬಿಕೆ ಶರಣಾಗಿ ತಾವು ಹತಾಶರಾಗಿಬಿಟ್ಟಿದ್ದಾರೆ.
ಗ್ರಾಮದಲ್ಲಿ ಮರಾಠಿ ಜನಾಂಗಕ್ಕೆ ಸೇರಿದ ಸುಮಾರು 15 ಕುಟುಂಬಗಳಿವೆ. ಈ ಘಟನೆ ಪ್ರಾರಂಭವಾದಲ್ಲಿಂದ ಹೆದರಿಕೊಂಡು ಒಬ್ಬರೆ ಮನೆಯಿಂದ ಹೊರಬರುವುದು ಮಾತ್ರವಲ್ಲ. ಇತರರು ಆ ದಾರಿಯಲ್ಲಿ ಓಡಾಡುವುದಕ್ಕು ಭಯಪಡುತ್ತಿದ್ದಾರೆ.
ಗ್ರಾಮ ಬಿಡುತ್ತೇವೆ: ಅಮಾಯಕ ಕುಟುಂಬಗಳು ಇಂತಹ ವಿಚಿತ್ರ ಮಾತುಗಳನ್ನೆ ನಂಬಿ ಸಾವಿಗೆ ಅಂಜಿ ಗ್ರಾಮವನ್ನೆ ತೊರೆಯಲು ಮುಂದಾಗಿವೆ. ಗ್ರಾಮ ತೊರೆದು ಎಲ್ಲಿಗೆ ಹೋಗುವುದು ಎಂಬ ಆತಂಕವನ್ನು ಕೂಡ ಅವರೆ ತಂದುಕೊಂಡಿದ್ದಾರೆ. ಈ ಬಗ್ಗೆ ವಿಚಾರವಂತರು ಮನೆ ಬಿಡಬೇಡಿ, ಸೂಕ್ತ ವೈದ್ಯರಿಂದ ಚಿಕಿತ್ಸೆ ಕೊಡಿಸಿ ಎಂದು ಮನವಿ ಮಾಡಿದರು ಕೂಡ ಆ ಬಗ್ಗೆ ಗ್ರಾಮಸ್ಥರು ಗಮನ ಹರಿಸುತ್ತಿಲ್ಲ.
ಮೂಢನಂಬಿಕೆ ನಿಷೇಧಿಸಬೇಕು ಎಂಬ ವ್ಯಾಪಕ ಚರ್ಚೆ ರಾಜ್ಯಾಧ್ಯಂತ ನಡೆಯುತ್ತಿರುವ ಇಂದಿನ ದಿನದಲ್ಲಿ ಈ ಗ್ರಾಮದ ಜನರು ಸಂಪೂರ್ಣವಾಗಿ ಮೂಢನಂಬಿಕೆಗೆ ಶರಣಾಗಿ ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ.