'ಸರ್ಕಾರ ಆದೇಶಿಸಿದರೆ ಅಧಿಕಾರ ಹಸ್ತಾಂತರಿಸುವೆ'
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ನ.13
ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ ಹುದ್ದೆಯಿಂದ ಸರ್ಕಾರ ತಮ್ಮನ್ನು ಬಿಡುಗಡೆಗೊಳಿಸಿರುವ ಬಗ್ಗೆ ಈ ವರೆಗೆ ನಮಗೆ ಯಾವುದೇ ಆದೇಶ ಬಂದಿಲ್ಲ.
ಆದೇಶ ಬಂದರೆ ತಾವು ಸಂತೋಷದಿಂದ ಸರ್ಕಾರ ಸೂಚಿಸಿದವರಿಗೆ ಅಧಿಕಾರ ಹಸ್ತಾಂತರಿಸುವುದಾಗಿ ಪ್ರೊ. ರಾಮೇಗೌಡ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ವರದಿ ಕುರಿತು ಸ್ಪಷ್ಟನೆ ನೀಡಿರುವ ಅವರು, ಆಡಳಿತಾತ್ಮಕ ವಲಯದಲ್ಲಿ ಅಧಿಕಾರದ ಹಸ್ತಾಂತರದ ಪ್ರಕ್ರಿಯೆಯು ಅಗತ್ಯತೆಗಳಿಗೆ ಅನುಗುಣವಾಗಿ ಬದಲಾವಣೆಗೊಳ್ಳುವುದು ಅತ್ಯಂತ ಸರ್ವೇ ಸಾಮಾನ್ಯವಾಗಿದ್ದು, ಸಹಜವೂ ಆಗಿದೆ. ಪ್ರೊ. ಮಲ್ಲಿಕಾ
ಘಂಟಿಯವರು ಕುಲಸಚಿವರಾಗಿ ಘನ ಸರ್ಕಾರದಿಂದ ಆದೇಶ ಪಡೆದು ಅಧಿಕಾರ ಸ್ವೀಕರಿಸಿದರೆ ಅತ್ಯಂತ ಸಂತೋಷದಿಂದ ಅಧಿಕಾರ ಹಸ್ತಾಂತರಿಸುವುದು ನನ್ನ ಆದ್ಯ ಕರ್ತವ್ಯವೆಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ವಿಶ್ವವಿದ್ಯಾಲಯದ ಅಂಕಪಟ್ಟಿ ಹಗರಣ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, 2009ರ ಸೆಪ್ಟೆಂಬರ್ 15ರಿಂದ ಆಗಸ್ಟ್ 8 2011ರವರೆಗೆ ಪರೀಕ್ಷಾಂಗ ಕುಲಸಚಿವನಾಗಿ ಕಾರ್ಯನಿರ್ವಹಿಸಿದ್ದು, ಹಾಲೇಶಪ್ಪನವರ ಅಂಕಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ನಾನೇ ದೂರುದಾರ. ಈ ಪ್ರಯುಕ್ತವೇ ಅಂಕಪಟ್ಟಿ ಪ್ರಕರಣದ ತನಿಖೆಗೆ ಚಾಲನೆ ಸಿಕ್ಕಿ ಈಗಲೂ ತನಿಖೆ ಮುಂದುವರಿದಿದೆ ಎಂದವರು ವಿವರಿಸಿದ್ದಾರೆ.
ಅಂಕಪಟ್ಟಿ ಹಗರಣದಲ್ಲಿ ಯಾರನ್ನು ನಾನು ರಕ್ಷಿಸಿಲ್ಲ. ಎಲ್ಲಾ ಸಂದರ್ಭಗಳಲ್ಲಿಯೂ ವಿಶ್ವವಿದ್ಯಾಲಯದ ನಿರ್ಣಯಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಧಾನ ವಹಿಸಿದ್ದೇನೆ ಎಂದವರು ಹೇಳಿದ್ದಾರೆ.