ಅಂತೂ ಇಂತು ಬಸ್ಸು ಬಂತು
ಕ.ಪ್ರ.ವಾರ್ತೆ, ಸಾಗರ, ನ.14 ಪಟ್ಟಣದ ಜನರ ಬಹಳ ದಿನಗಳ ಬೇಡಿಕೆಯಾಗಿದ್ದ ನಗರ ಸಾರಿಗೆ ಸೌಲಭ್ಯ ಅಂತೂ ಜಾರಿಗೆ ಬಂದಿದೆ. ಗುರುವಾರ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಲ್ಲಿ ನಗರ ಸಾರಿಗೆ ಸೌಲಭ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಧದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಬಹಳ ಕಾಲದಿಂದ ನಗರ ಸಾರಿಗೆ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದ್ದು, ಅವರ ಆಶಯ ಪೂರೈಸುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯ.
ಮೊದಲ ಹಂತದಲ್ಲಿ 2 ಬಸ್ಸುಗಳನ್ನು ನಗರ ಸಾರಿಗೆಗಾಗಿ ಬಿಡಲಾಗಿದೆ. ಜನರ ಸ್ಪಂದನೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚುವರಿ ಬಸ್ಸು ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ತುರ್ತು ಅಗತ್ಯ: ಸಾಗರ ನಗರ ಬೆಳೆಯುತ್ತಿದ್ದು, ನಗರ ಸಾರಿಗೆ ಸೌಲಭ್ಯದ ತುರ್ತು ಅಗತ್ಯವಿದೆ. ನಗರ ಸಾರಿಗೆ ಯಾವ್ಯಾವ ಮಾರ್ಗದಲ್ಲಿ ಸಂಚರಿಸಬೇಕೆಂದು ಈಗಾಗಲೇ ಸರ್ವೇ ನಡೆದಿದೆ. ಹಾಲಿ ಸಂಚರಿಸುತ್ತಿರುವ 2 ಬಸ್ಸು ಪ್ರತಿದಿನ 40 ಬಾರಿ ನಗರವನ್ನು ಸಂಚರಿಸಲಿದೆ.
ನಗರದ ಹೊರವಲಯದಿಂದ ನಗರ ಮಧ್ಯಭಾಗಕ್ಕೆ ಬರಲು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ. ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಬಸ್ಸು ಸಂಚಾರವಿರುತ್ತದೆ ಎಂದರು.
ಸಾರಿಗೆ ಸೌಲಭ್ಯ ಸಮರ್ಪಕವಾಗಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಲಾಗಿದೆ. ಹೊಸನಗರದಿಂದ ಸಾಗರಕ್ಕೆ ಈಗಾಗಲೇ 2 ಬಸ್ಸು ತಿರುಗಾಟಕ್ಕೆ ಪರ್ಮಿಟ್ ಸಿಕ್ಕಿದೆ. ಇದರ ಜೊತೆಗೆ ಶಿವಮೊಗ್ಗದಿಂದ ಸಾಗರಕ್ಕೆ ಸಿಟಿ ಬಸ್ಸು ಸೌಲಭ್ಯ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದವರು ಹೇಳಿದರು.
ನೂತನವಾಗಿ ನಿರ್ಮಾಣ ಹಂತದಲ್ಲಿರುವ ಖಾಸಗಿ ಬಸ್ಸು ನಿಲ್ದಾಣ ಕುರಿತು ಸಣ್ಣಪುಟ್ಟ ಸಮಸ್ಯೆ ಇದ್ದು, ಅದು ಬಗೆಹರಿದ ನಂತರ ಇನ್ನಷ್ಟು ಹೆಚ್ಚು ಬಸ್ಸು ಸಂಚಾರ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ದಿವಾಕರ್, ಡಿಪೋ ಮ್ಯಾನೇಜರ್ ರಮೇಶ್, ನಗರಸಭೆ ಸದಸ್ಯ ತೀ.ನ. ಶ್ರೀನಿವಾಸ್, ಎನ್.ಲಲಿತಮ್ಮ, ಜಿ.ಕೆ. ಭೈರಪ್ಪ, ಪ್ರಮುಖರಾದ ಕೆ. ಹೊಳೆಯಪ್ಪ, ಗಣಪತಿ ಸುಳಗೋಡು ಹಾಜರಿದ್ದರು.
ಬಸ್ಸು ಮಾರ್ಗ: ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣ- ವೆಂಕರಮಣಸ್ವಾಮಿ ದೇವಸ್ಥಾನ, ಪತ್ರಿಕಾ ಭವನ, ಶ್ರೀಧರ ನಗರ, ಕೃಷಿ ಉತ್ಪನ್ನ ಮಾರುಕಟ್ಟೆ, ಹುಲ್ಲತ್ತಿ- ಸುಭಾಷ್ ನಗರ- ಸೂರನಗದ್ದೆ. ವಾಪಾಸ್ ಇದೇ ಮಾರ್ಗವಾಗಿ ಮುಖ್ಯ ಬಸ್ಸು ನಿಲ್ದಾಣ ತಲುಪುತ್ತದೆ.
ಮ್ತತೊಂದು ಬಸ್ಸು ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣ-ಶಿವಪ್ಪನಾಯಕ ವೃತ್ತ ್ತ-ಆರ್.ಟಿ.ಒ. ಕಚೇರಿ-ಇಕ್ಕೇರಿ, ರಾಮನಗರ-ಶಿವಪ್ಪನಾಯಕ ನಗರ-ರಾಮಮಂದಿರ-ಆಶ್ರಮ ಶಾಲೆ-ಮಹಿಳಾ ಕಾಲೇಜು-ಗಾಂಧಿನಗರ ವೃತ್ತ-ರಾಮನಗರ ಮೂಲಕ ಮುಖ್ಯ ಬಸ್ಸು ನಿಲ್ದಾಣ ತಲುಪುತ್ತದೆ.