ನಮೋ ರ್ಯಾಲಿ ಜಾಗೃತಿಗೆ ಬಿಜೆಪಿ ಪಾದಯಾತ್ರೆ
ಕ.ಪ್ರ.ವಾರ್ತೆ ಭದ್ರಾವತಿ ನ.14
ಬೆಂಗಳೂರಿನಲ್ಲಿ ನ.17ರಂದು ನಡೆಯಲಿರುವ ನರೇಂದ್ರ ಮೋದಿಯವರ ಭಾರತ ಗೆಲ್ಲಿಸಿ ಅಭಿಯಾನದ ಬಗ್ಗೆ ಪಟ್ಟಣದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬಿಜೆಪಿ ಭದ್ರಾವತಿ ಕ್ಷೇತ್ರ ಘಟಕದ ಪ್ರಮುಖರು ಗುರುವಾರ ಸಂಜೆ ಪಟ್ಟಣದ ರಂಗಪ್ಪ ವೃತ್ತದಿಂದ ಅಪ್ಪರ್ ಹುತ್ತಾದಲ್ಲಿರುವ ನಂದಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿ ಬಹಿರಂಗಸಭೆ ನಡೆಸಿದರು.
ಇದರ ನೇತೃತ್ವ ವಹಿಸಿದ್ದ ಬಿಜೆಪಿ ಭದ್ರಾವತಿ ಕ್ಷೇತ್ರ ಘಟಕದ ಅಧ್ಯಕ್ಷ ಎಂ. ಮಂಜುನಾಥ್ ಮಾತನಾಡಿ, ಈಗಾಗಲೇ ಭದ್ರಾವತಿ ತಾಲೂಕಿನಿಂದ ಸುಮಾರು 750 ಕಾರ್ಯಕರ್ತರು ಬೆಂಗಳೂರಿಗೆ ತೆರಳಲು ತಮ್ಮ ಹೆಸರು ನೋಂದಾಯಿಸಿದ್ದು, ಭಾಗವಹಿಸುವ ಕಾರ್ಯಕರ್ತರ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚಾಗುವ ಸಂಭವವಿದೆ ಎಂದು ತಿಳಿಸಿದರು.
2 ವಿಶೇಷ ರೈಲು: ನ.16ರ ರಾತ್ರಿ ಬೆಂಗಳೂರಿಗೆ ತೆರಳುವ ಕಾರ್ಯಕರ್ತರಿಗೆ ಅನುಕೂಲವಾಗುವಂತೆ ಪಕ್ಷದ ವತಿಯಿಂದ ಶಿವಮೊಗ್ಗದಿಂದ ಬೆಂಗಳೂರಿಗೆ 2 ವಿಶೇಷ ರೈಲುಗಾಡಿಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದು ಮೋದಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ಹೇಳಿದರು.
ಆರ್.ಎಸ್. ಶೋಭಾ, ನವೀದ್, ಜಿ. ಆನಂದ ಕುಮಾರ್, ಎಂ.ಎಸ್. ಸುರೇಶಪ್ಪ, ರಮೇಶ್, ಧರ್ಮಪ್ರಸಾದ್, ವೆಂಕಟೇಶ್, ರಮಾನಾಥರಾವ್ ಬರ್ಗೆ ಇತರರು ಇದ್ದರು.