ಭದ್ರಾ: ತಪ್ಪಿತಸ್ಥರ ಮೇಲೆ ಕ್ರಮ
ಕ.ಪ್ರ.ವಾರ್ತೆ, ಶಿವಮೊಗ್ಗ, ನ.14 ಭದ್ರಾ ಮೇಲ್ದಂಡೆ ಕಾಲುವೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ವಿಚಾರ ನನ್ನ ಗಮನಕ್ಕೂ ಬಂದಿದ್ದು, ಕಾಮಗಾರಿಯನ್ನು ಮತ್ತೊಮ್ಮೆ ಪರಿಶೀಲನೆಗೊಳಪಡಿಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾ ಕಾಲುವೆ ಆಧುನೀಕರಣದಲ್ಲಿ ಅವ್ಯವಹಾರವಾಗಿದೆ ಎಂಬ ದೂರುಗಳು ಕೇಳಿಬಂದಿದೆ. ಈಗಾಗಲೇ ಮೂರನೇ ವ್ಯಕ್ತಿಯ ತನಿಖಾ ವರದಿ ಕೂಡ ಬಂದಿದ್ದು, ಕಾಮಗಾರಿಯಲ್ಲಿ ಲೋಪವಾಗಿರುವುದು ಗೊತ್ತಾಗಿದೆ. ಈಗ ಇನ್ನೊಮ್ಮೆ ಐಐಎಸ್ಸಿ ಅಥವಾ ಅದೇ ರೀತಿಯ ಮಾನ್ಯತೆ ಪಡೆದಂತಹ ಸಂಸ್ಥೆಯಿಂದ ತನಿಖೆ ನಡೆಸುವ ಉದ್ದೇಶವಿದೆ ಎಂದರು.
ತಪ್ಪಿತತ್ಥರ ಮೇಲೆ ಕ್ರಮ: ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ.
ಕಾಮಗಾರಿ ಲೋಪಕ್ಕೆ ಗುತ್ತಿಗೆದಾರ, ಅಧಿಕಾರ ಅಥವಾ ಅದಕ್ಕಿಂತ ಮೇಲೆ ಜನಪ್ರತಿನಿಧಿಗಳೂ ಕಾರಣವಾಗಿದ್ದರೆ. ಅವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ, ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ರು. 71.33ಕೋಟಿ ವೆಚ್ಚದ ತುಂಗಾ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಕೆಲಸ ಆರಂಭವಾಗಿದೆ. ಇದರಿಂದಾಗಿ ಶಿವಮೊಗ್ಗ ತಾಲೂಕಿನ ಹಾಯ್ಹೊಳೆ, ಬಾರೇಹಳ್ಳ ಹಾಗೂ ಗೌಡನಕೆರೆಗಳಿಗೆ ನೀರೊದಗಿಸಲಾಗುವುದು ಎಂದರು.
ಆದ್ಯತೆ ಮೇರೆ ಕಾಮಗಾರಿ: ತುಂಗಾ ಆಧುನೀಕರಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಸಮರ್ಪಕವಾಗಿ ನಿಭಾಯಿಸಲಾಗುವುದು. ಆಧುನೀಕರಣ ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಿಲ್ಲ ಎಂದು ಅವರು ತಿಳಿಸಿದರು.
ತುಂಗಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಮೈಸೂರಿನ ಕೆ.ಆರ್.ಎಸ್. ಬೃಂದಾವನದ ಮಾದರಿಯಲ್ಲಿ ತುಂಗಾ ಬೃಂದಾವನ ನಿರ್ಮಿಸುವ ಚಿಂತನೆಯಿದೆ.
ಉದ್ಯಾನ ನಿರ್ಮಿಸಿ, ನಿರ್ವಹಿಸಿ ಹಸ್ತಾಂತರಿಸುವ ಖಾಸಗಿ ಸಂಸ್ಥೆಗಳಿಗೆ ಆಹ್ವಾನಿಸಲಾಗಿದೆ. ಆ ನಂತರ ಈ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದರು.