ಮಾಜಿ ಶಾಸಕರ ಕುಮ್ಮಕ್ಕಿನಿಂದ ತೋಟ ತೆರವು: ಮಾಲೀಕ ಆರೋಪ
ಶಿವಮೊಗ್ಗ: ಹೊಸನಗರ ತಾಲೂಕಿನ ತ್ರಿಣಿವೆ ಗ್ರಾಮದಲ್ಲಿ ಅರಣ್ಯ ಇಲಾಖೆಯುವರು ಅಡಕೆ ತೋಟವನ್ನು ತೆರವು ಮಾಡಿದ್ದು ಮಾಜಿ ಶಾಸಕ ಸ್ವಾಮಿರಾವ್ ಅವರ ಕುಮ್ಮಕ್ಕಿನಿಂದ ಎಂದು ತೋಟದ ಮಾಲೀಕ, ಗ್ರಾಮ ಪಂಚಾಯ್ತಿ ಸದಸ್ಯ ಶಂಕರಪ್ಪ ಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಉಚಿತ ಕಾನೂನು ನೆರವು ಪ್ರಾಧಿಕಾರದ ಮೂಲಕ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಈ ಬಗ್ಗೆ ತಿಳಿಸಿದರೂ ಸಹ ಮೇಲ್ಮನವಿ ವಿಚಾರಣೆಗೆ ಬರುವ ಮುಂಚೆಯೇ ತೆರವು ಮಾಡಲಾಗಿದೆ ಎಂದಿದ್ದಾರೆ.
ಕ್ವಾರಿಗೆ ದಾರಿ: ತಮ್ಮ ತೋಟದ ಮೂಲಕವೇ ಮರಳು ಕ್ವಾರಿಗೆ ಹೋಗುವ ದಾರಿ ಇದೆ. ಪರ್ಮಿಟ್ ಇಲ್ಲದೇ ಇಲ್ಲಿಂದ ಮರಳು ಸಾಗಿಸಲಾಗುತ್ತಿತ್ತು. ಆದ್ದರಿಂದ ಪರ್ಮಿಟ್ ಸಿಗುವವರೆಗೂ ಲಾರಿಗಳಿಗೆ ಸಾಗಲು ಅವಕಾಶ ನೀಡುವುದಿಲ್ಲ ಎಂದ ಹೇಳಿ ಲಾರಿಗಳಿಗೆ ರಸ್ತೆ ಬಂದ್ ಮಾಡಿದ್ದೆ. ಆದ್ದರಿಂದ ತಮ್ಮ ತೋಟ ತೆರವು ಮಾಡಲಾಗಿದೆ ಎಂದ ಶಂಕರಪ್ಪಗೌಡ, ತ್ರಿಣಿವೆ ಗ್ರಾಮದ 55 ಕುಟುಂಬಗಳಿಗೆ ಸೇರಿದ ಎಲ್ಲಾ ಜಮೀನು ತೆರವಿಗೆ ಹೈಕೋರ್ಟ್ ಆದೇಶವಿದೆ. ಆದರೂ ತಮ್ಮ ತೋಟವನ್ನು ಮಾತ್ರ ಗುರಿಯಾಗಿಸಲಾಗಿದೆ ಎಂದರು.
ಜಿಲ್ಲಾ ಭೂ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಲೋಕೇಶ್ ಈಸೂರು, ತೆರವು ಮಾಡಲಾಗುತ್ತಿದೆ ಎಂಬ ವಿಷಯ ಗೊತ್ತಿದ್ದರೂ ವಿಧಾನಸಭೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿ ತಡೆಯುವ ಪ್ರಯತ್ನ ನಡೆಸಲೇ ಇಲ್ಲ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅರಣ್ಯ ಹಕ್ಕು ಕಾಯ್ದೆ ಒಂದು ಬೋಗಸ್ ಎಂದು ಹೇಳುತ್ತಾರೆ. ಸುಪ್ರೀಂಕೋರ್ಟ್ ತೀರ್ಪನ್ನೇ ತಿರಸ್ಕರಿಸುವಂತಹ ಮಾತುಗಳನ್ನಾಡುತ್ತಾರೆ ಎಂದು ಆರೋಪಿಸಿದರು.
ಪ್ರಮುಖರಾದ ಗಣೇಶ್ ಬೆಳ್ಳೆ, ವೈ.ಬಿ. ಚಂದ್ರಕಾಂತ್, ಸುವರ್ಣಮ್ಮ, ನಾಟರಾಜ ಗೌಡ್ರು ಸೇರಿದಂತೆ ಹಲವರು ಗೋಷ್ಠಿಯಲ್ಲಿದ್ದರು.