'ಸಾಹಿತ್ಯ ಕಕ್ಷೆಗೆ ಬಂದವರು ನಿರೀಕ್ಷಿತ ಸಾಧನೆ ಮಾಡಲಿ'
ಕ.ಪ್ರ.ವಾರ್ತೆ ಸಾಗರ ನ.14 ತಾಲೂಕು ಕಸಾಪ ಸೋಮವಾರ ಬೇದೂರಿನ ಮಹಾಬಲೇಶ್ವರ ಭಟ್ಟ ಅವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಕಾಶ್ ಆರ್. ಕಮ್ಮಾರ್ ಅವರ 55ರ ಸಂಭ್ರಮ ನಿಹಾರಿಕೆ ಅಭಿನಂದನಾ ಕೃತಿಯನ್ನು ಸಾಹಿತಿ ಟಿ. ಮಹಾಬಲೇಶ್ವರ ಭಟ್ಟರು ಬಿಡುಗಡೆ ಮಾಡಿದರು.
ಸಾಹಿತ್ಯ ಕ್ಷೇತ್ರ ಎಲ್ಲರನ್ನೂ ತನ್ನತ್ತ ಆಕರ್ಷಿಸುವುದಿಲ್ಲ. ಸಾಹಿತ್ಯದ ಕಕ್ಷೆಗೆ ಬಂದವರು ತಮ್ಮ ಹಂತದಲ್ಲಿ ನಿರೀಕ್ಷಿತ ಸಾಧನೆ ಮಾಡುವುದನ್ನು ಮರೆಯಬಾರದು. ಕಮ್ಮಾರ್ ಒಬ್ಬ ಶಿಕ್ಷಕರಾಗಿ ಸಾಹಿತ್ಯಾಭಿರುಚಿ ಜೊತೆಗೆ ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಎಂದರು.
ಮಧುರ ಸಂಬಂಧ: ಸಾಹಿತಿ ಡಾ.ನಾ. ಡಿಸೋಜ ಮಾತನಾಡಿ, ಸಾಹಿತ್ಯ ಎಲ್ಲರನ್ನೂ ಕಟ್ಟಿ ಹಾಕುವ ಮಧುರ ಸಂಬಂಧವನ್ನು ಹೊಂದಿದೆ. ಯಾವುದರ ಸಂಪರ್ಕದಿಂದ ಮನಸ್ಸಿಗೆ ಹಿತವಾಗುವುದೋ ಅದು ನಿಜವಾದ ಸಾಹಿತ್ಯ ಎಂದರು.
ಪುಸ್ತಕದ ಕುರಿತು ಕವಿ ಬೇಡರೆಡ್ಡಿಹಳ್ಳಿ ಪಂಪಣ್ಣ ಮಾತನಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ವಿ.ಟಿ. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್, ಜಿಪಂ ಮಾಜಿ ಸದಸ್ಯ ಬಿ.ಆರ್. ಜಯಂತ್, ಪ್ರಕಾಶ್ ಆರ್. ಕಮ್ಮಾರ್ ಹಾಜರಿದ್ದರು. ಉಮೇಶ್ ಹಿರೇನೆಲ್ಲೂರು ಸ್ವಾಗತಿಸಿದರು. ಜಿ. ನಾಗೇಶ್ ವಂದಿಸಿದರು. ವಿ. ಶಂಕರ್ ನಿರೂಪಿಸಿದರು.