ಇನ್ನು ಶಾಲೆಗೊಂದು ಕೊಳವೆ ಬಾವಿ...!
ಕ.ಪ್ರ.ವಾರ್ತೆ, ಶಿವಮೊಗ್ಗ, ನ.15 ಗ್ರಾಮೀಣ ಭಾಗದಲ್ಲಿ ಬೇಸಿಗೆ ಸಂದರ್ಭದಲ್ಲಿ ಶಾಲೆ ಹಾಗೂ ಬಿಸಿಯೂಟಕ್ಕೆ ನೀರಿನ ಕೊರತೆಯಾಗುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪಂಚಾಯಿತಿ ಈ ಬಗ್ಗೆ ವಿಶೇಷ ಗಮನಹರಿಸಿ ಈಗಲೇ ಕ್ರಮಕ್ಕೆಮುಂದಾಗಿದೆ.
ಪ್ರತಿ ಶಾಲೆಗೊಂದು ಪ್ರತ್ಯೇಕ ಬೋರ್ವೆಲ್ ವ್ಯವಸ್ಥೆ ಮಾಡುವ ಬಗ್ಗೆ ಪ್ರಕ್ರಿಯೆ ಆರಂಭಿಸಿದ್ದು, ಕಳೆದ ಬಾರಿಯ ಸಮಸ್ಯೆ ಈ ಬಾರಿ ಮುಂದುವರೆಯಬಾರದೆಂಬ ನಿರ್ಧಾರಕ್ಕೆ ಬಂದಿದೆ.
ಪ್ರತ್ಯೇಕ ಬೋರ್ವೆಲ್: ಇತ್ತೀಚಿನವರೆಗೆ ಎಲ್ಲಾ ಶಾಲೆ ಮತ್ತು ಅಂಗನವಾಡಿಗಳಿಗೆ ಗ್ರಾಪಂಗಳಿಂದ ಅಳವಡಿಸಲಾಗಿರುವ ಕುಡಿಯುವ ನೀರಿನ ಸಂಪರ್ಕವನ್ನೇ ಉಪಯೋಗಿಸಿಕೊಳ್ಳಲಾಗುತ್ತಿತ್ತು.
ಹಾಗೆಯೇ ಸುಪ್ರಿಂ ಕೋರ್ಟ್ ಆದೇಶದಂತೆ ಪ್ರತಿ ಶಾಲೆಗೂ ಕುಡಿಯುವ ವ್ಯವಸ್ಥೆಯಾಗಬೇಕೆಂಬ ನಿರ್ದೇಶನವಿದೆ.
ಸರ್ಕಾರ ತರಾತುರಿಯಲ್ಲಿ ಈ ಬಗ್ಗೆ ಕ್ರಮ ಕೈಗೊಂಡು ನೀರಿನ ವ್ಯವಸ್ಥೆಯನ್ನೂ ಮಾಡಿತು. ಗ್ರಾಪಂ ನಲ್ಲಿಗಳನ್ನೇ ಬಳಸಿಕೊಂಡು ಶಾಲೆ ಮುಂಭಾಗ ಟ್ಯಾಂಕ್ ನಿರ್ಮಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
ಆದರೆ, ಹಲವು ಗ್ರಾಮಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ಶಾಲೆಗಳಿಗೂ ತೊಂದರೆಯಾಗುತ್ತಿತ್ತು.
ನೀರಿಗಾಗಿ ಪರದಾಟ: ಅದರಲ್ಲೂ ಮುಖ್ಯವಾಗಿ ಬಿಸಿಯೂಟದ ಅಡುಗೆ ತಯಾರಿಸಲು ಪರದಾಡಬೇಕಾದ ಪ್ರಸಂಗಗಳೂ ನಡೆದವು. ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಬಳಸಿಕೊಂಡು ಮಕ್ಕಳಿಂದ ನೀರನ್ನು ತರಿಸಿಕೊಳ್ಳಬೇಕಾದ ಸ್ಥಿತಿಯೂ ನಿರ್ಮಾಣವಾಯಿತು.
ಇದನ್ನು ಮನಗಂಡ ಅಧಿಕಾರಿಗಳು ಯಾವೆಲ್ಲಾ ಶಾಲೆಗಳಲ್ಲಿ ಖಾಯಂ ನೀರಿನ ವ್ಯವಸ್ಥೆ ಇಲ್ಲವೋ ಅಂತಹ ಶಾಲೆಗಳಿಗೆ ಪ್ರತ್ಯೇಕ ಬೋರ್ವೆಲ್ ಕೊರೆಯುವಂತೆ ಸೂಚಿಸಿದೆ.
ಇದಕ್ಕೆ ಪೂರಕವಾಗಿ ಕೇಂದ್ರದಿಂದ ಈ ವ್ಯವಸ್ಥೆಗೆ ಸಾಕಷ್ಟು ಅನುದಾನವೂ ಇದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಸಸಿಕಾಂತ್ ಸೆಂಥಿಲ್ ಹೇಳುತ್ತಾರೆ.
ಶಾಲೆಗಳ ಜೊತೆಗೆ ಅಂಗನವಾಡಿಗಳಿಗೂ ಪ್ರತ್ಯೇಕ ಬೋರ್ವೆಲ್ ಕೊರೆಸಲು ಅವಕಾಶವಿದೆ. ಶಾಲೆ ಮತ್ತು ಅಂಗನವಾಡಿಗಳು ಸ್ವತಂತ್ರ ಕುಡಿಯುವ ನೀರಿನ ಅಸ್ತಿತ್ವ ಹೊಂದಿರಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸುತ್ತಾರೆ.
ಅಗ್ನಿನಿರೋಧಕ ವಸ್ತ್ರ
ರಾಜ್ಯದ ವಿವಿಧೆಡೆ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವಾಗ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಅಡುಗೆ ತಯಾರಕರಿಗೆ ಸೂಕ್ತ ರಕ್ಷಣೆ ಒದಗಿಸಲು ನಿರ್ಧರಿಸಲಾಗಿದೆ.
ಅಕ್ಷರ ದಾಸೋಹ ಸಿಬ್ಬಂದಿಗೆ ಬೆಂಕಿ ನಿರೋಧಕ ವಸ್ತ್ರಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಜಿಲ್ಲೆಯಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್, ಇನ್ನುಮುಂದೆ ಅಕ್ಷರ ದಾಸೋಹದ ಸಿಬ್ಬಂದಿ ಬೆಂಕಿ ನಿರೋಧಕ ಸಮವಸ್ತ್ರದೊಂದಿಗೆ ಶಾಲೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರು ಬಿಸಿಯೂಟದ ಸಿಬ್ಬಂದಿಗೆ ಈ ಸಮವಸ್ತ್ರ ನೀಡಲಾಗುವುದು. ಕೆಲವೇ ದಿನಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ ಎಂದರು.
ಇಷ್ಟೇ ಅಲ್ಲದೇ, ಅಕ್ಷರ ದಾಸೋಹದ ಅಡುಗೆ ತಯಾರಿಸಲೆಂದೇ ಅಗಲವಾದ ಪಾತ್ರೆಗಳನ್ನು ನೀಡುವಂತೆ ಸರ್ಕಾರ ಸೂಚಿಸಿದೆ. ಇದರ ಖರೀದಿಯೂ ಸದ್ಯದಲ್ಲಿಯೇ ನಡೆಯಲಿದೆ.
ಶ್ರೀಕಾಂತ ಭಟ್