ತಾಪಂ ಅಧ್ಯಕ್ಷರಾಗಿ ಲೀಲಾವತಿ ಆಯ್ಕೆ...
ಕ.ಪ್ರ.ವಾರ್ತೆ, ಶಿಕಾರಿಪುರ, ನ.15 ಶಿಕಾರಿಪುರ ನೂತನ ಅಧ್ಯಕ್ಷರಾಗಿ ಕೆಜೆಪಿಯ ಲೀಲಾವತಿ ಲಕ್ಷ್ಮಣ್ ಶುಕ್ರವಾರ ನಡೆದ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಹೊಸೂರು ಕ್ಷೇತ್ರದ ಸದಸ್ಯೆಯಾಗಿರುವ ಲೀಲಾವತಿ ಶಿಕಾರಿಪುರ ತಾಪಂ ಎರಡನೇ ಅವಧಿಯ 20 ತಿಂಗಳಿನಲ್ಲಿ ಕೊನೆ 10 ತಿಂಗಳ ಅಧ್ಯಕ್ಷೆಯಾಗಿ ಪಕ್ಷದ ಆಂತರಿಕ ಒಪ್ಪಂದದನ್ವಯ ಆಯ್ಕೆಯಾಗಿದ್ದಾರೆ. ಬಿಸಿಎಂಎ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಅಧ್ಯಕ್ಷರಾಗಿದ್ದ ಹನುಮಂತಪ್ಪ 10 ತಿಂಗಳ ಕಾಲ ಅಧಿಕಾರದಲ್ಲಿದ್ದು, ನಂತರ ರಾಜಿನಾಮೆ ನೀಡಿದ್ದರು.
ಅವಿರೋಧ ಆಯ್ಕೆ: ಈ ದಿಸೆಯಲ್ಲಿ ಬಾಕಿಯುಳಿದ ಅವಧಿಗೆ ನಡೆದ ಚುನಾವಣೆಯಲ್ಲಿ ಲೀಲಾವತಿ ಮಾತ್ರ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, 17 ಸದಸ್ಯರಲ್ಲಿ 12 ಸ್ಥಾನವನ್ನು ಹೊಂದಿರುವ ಕೆಜೆಪಿಯ ಲೀಲಾವತಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಘೋಷಿಸಿದರು. ಈ ಸಂದರ್ಬದಲ್ಲಿ ಕಾಂಗ್ರೆಸ್ನ ಎಲ್ಲಾ 5 ಸದಸ್ಯರು ಗೈರು ಹಾಜರಾಗಿದ್ದರು. ಜಿಪಂ ಸದಸ್ಯೆ ಶಾಂತಮ್ಮ, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ಚಂದ್ರಶೇಖರ್, ಉಪಾಧ್ಯಕ್ಷೆ ಸರೋಜಮ್ಮ, ಲಕ್ಷ್ಮಣ್ ನಾಯ್ಕ್, ಅನಸೂಯಮ್ಮ, ಮುಖಂಡ ವಸಂತಗೌಡ, ನಾಗರಾಜಪ್ಪ, ಹಾಲಪ್ಪ, ಸುಕೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.