ದೇಶದಲ್ಲಿ ಚಿನ್ನಾಭರಣದ ಮೇಲೆ ಹೂಡಿಕೆ ಹೆಚ್ಚು
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ನ.15
ಭಾರತದಲ್ಲಿ ಜನ ತಮ್ಮ ಆದಾಯದ ಉಳಿತಾಯ ಹಣವನ್ನು ಹೆಚ್ಚಾಗಿ ಚಿನ್ನಾಭರಣ ಖರೀದಿ ಮಾಡಲು ಹೂಡಿಕೆ ಮಾಡುತ್ತಾರೆ ಎಂದು ಸೆಕ್ಯೂರಿಟಿಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಸಂಸ್ಥೆ ಅಧಿಕಾರಿ ಮನೋಜ್ ಸಲ್ಡಾನ ಹೇಳಿದರು.
ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ ಶುಕ್ರವಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಹಣಕಾಸಿನ ಶಿಕ್ಷಣ ಕಾರ್ಯಾಗಾರ ಕುರಿತು ಮಾತನಾಡಿದ ಅವರು, ಒಂದು ಸಮೀಕ್ಷೆ ಪ್ರಕಾರ ದೇಶದಲ್ಲಿ ಪ್ರತಿಯೊಬ್ಬರೂ ಶೇ.30 ಹಾಗೂ ಅಮೇರಿಕಾದಲ್ಲಿ ಶೇ.20 ಹಣ ಉಳಿತಾಯ ಮಾಡುತ್ತಾರೆ. ಅಮೇರಿಕಾದಲ್ಲಿ ಉಳಿತಾಯವನ್ನು ಬ್ಯಾಂಕ್ ಡೆಪಾಸಿಟ್ ಮಾಡುವ ಮೂಲಕ ಉಳಿತಾಯ ಮಾಡಿದರೆ, ಭಾರತದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ ಎಂದರು.
ಜನ ಬಡವರಲ್ಲ: ಭಾರತದ ಜನ ಬಡವರಲ್ಲ. ಆದರೆ ಬಡ ಹೂಡಿಕೆದಾರರಿದ್ದಾರೆ. ಚಿನ್ನಕ್ಕೆ ಹಣ ಹೂಡಿಕೆ ಮಾಡುವುದರಿಂದ ಲಾಭಾಂಶ ಕಡಿಮೆ ಇದ್ದು, ಅದನ್ನು ಬಳಸದೆ ಹಾಗಿಯೇ ಇಡುವುದರಿಂದ ಯಾವುದೇ ಲಾಭ ಬರುವುದಿಲ್ಲ. ಬ್ಯಾಂಕ್ನಲ್ಲಿ ಹೂಡಿಕೆ ಮಾಡಿದರೆ, ಚಿನ್ನಕ್ಕಿಂತ ಹೆಚ್ಚಿನ ಲಾಭವನ್ನು ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಪಡೆಯಬಹುದು ಎಂದರು.
ಅಮೆರಿಕಾದಲ್ಲಿ ಪ್ರತಿಯೊಬ್ಬರೂ ಲೋನ್ ಪಡೆಯಬೇಕೆಂಬ ನಿಯಮವಿದೆ. ಇದರಿಂದ ದೇಶದ ಜನ ಉದ್ಯೋಗ ಸೃಷ್ಟಿಸಿಕೊಳ್ಳುತ್ತಾರೆ ಎಂಬ ಉದ್ದೇಶ ಆ ದೇಶದ್ದು. ಆದರೆ, ಭಾರತದಲ್ಲಿ ಸಾಲ ಪಡೆಯಲು ಬಹಳಷ್ಟು ಕಾನೂನು ಕಟ್ಟಳೆಗಳಿವೆ. ಆದರಿಂದ ಜನ ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಮುಂದಾಗುವುದಿಲ್ಲ ಎಂದು ತಿಳಿಸಿದರು.
ಮರುಪಾವತಿ ಮಾಹಿತಿ: ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್ ಪ್ರತಿಯೊಬ್ಬ ವ್ಯಕ್ತಿ ಬ್ಯಾಂಕ್ ಗಳಲ್ಲಿ ಸಾಲ ಪಡೆಯುವ, ಮರುಪಾವತಿ ಮಾಡಿರುವ ಬಗ್ಗೆ ಮಾಹಿತಿ ನೀಡುತ್ತದೆ. ಈ ಹಿನ್ನೆಲೆಯಲ್ಲಿಯೇ ಪಾನ್ ಕಾರ್ಡ್ ಪಡೆಯುವುದು. ಇದರಿಂದ ಯಾವುದೇ ಬ್ಯಾಂಕ್ನಲ್ಲಿ ಸಾಲ ಬಗ್ಗೆ ಮಾಹಿತಿ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ಗಳ ಲಾಭದಾಯಕ ಸಂಸ್ಥೆಗಳು. ಬ್ಯಾಂಕ್ನಲ್ಲಿರುವ ಹಣಕ್ಕೆ ಸರ್ಕಾರ ಯಾವುದೇ ಹೊಣೆಯಾಗುವುದಿಲ್ಲ ಎಂದ ಅವರು, ಪೋಸ್ಟ್ ಆಫೀಸ್ ಮೂಲಕವೂ ಹಣ ಉಳಿತಾಯ ಮಾಡಬಹುದು. ಇಲ್ಲಿಯೂ ಬ್ಯಾಂಕ್ ಮಾದರಿ ಸಾಕಷ್ಟು ಖಾತೆಗಳಿವೆ. ಇದನ್ನು ಸಾರ್ವಜನಿಕರು, ನೌಕರರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಘದ ಅಧ್ಯಕ್ಷ ಎಸ್.ಎಂ. ಜಯದೇವಯ್ಯ, ಸಿ.ಎಚ್. ಚಂದ್ರಶೇಖರಪ್ಪ ಮತ್ತಿತರರು ಇದ್ದರು.