ನಾಳೆ 'ದೇವಕೃಪ' ಕೃತಿ ಬಿಡುಗಡೆ
ಶಿವಮೊಗ್ಗ: ಕೆಳನರಸೆ ದೇವಪ್ಪಗೌಡ ಹಾಗೂ ಅವರ ಪತ್ನಿ ಗೌರಮ್ಮ ಸಂಸ್ಮರಣ ಗ್ರಂಥ 'ದೇವಕೃಪ' ನಗರದ ಕುವೆಂಪು ರಂಗಮಂದಿರದಲ್ಲಿ ನ.17ರಂದು ಮಧ್ಯಾಹ್ನ 3.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಬಿಡುಗಡೆ ಮಾಡುವರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೃತಿಯ ಸಂಪಾದಕ ಪ್ರೊ. ಶ್ರೀಕಂಠ ಕೂಡಿಗೆ, ಬಡತನದಿಂದ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗದ ಎಷ್ಟೋ ವಿದ್ಯಾರ್ಥಿಗಳಿಗೆ ದೇವಪ್ಪಗೌಡರು ನೆರವಾಗಿದ್ದಾರೆ. ಮಂಡಿ ಮಾಲೀಕರಾಗಿದ್ದ ದೇವಪ್ಪಗೌಡರು ತಮಗೆ ಬರುವ ಆದಾಯದಲ್ಲಿ ತಮ್ಮ ಮನೆಯನ್ನಷ್ಟೇ ಸಲುಹದೇ ವಿದ್ಯೆಯನ್ನರಸಿ ಮಲೆನಾಡಿನ ಕಡೆಯಿಂದ ಬಂದ ಹಲವರಿಗೆ ತಮ್ಮ ಮನೆಯಲ್ಲಿಯೇ ಆಶ್ರಯ ನೀಡಿದರು ಎಂದರು. ಕೆಲವರು ಊಟ ಮಾಡಿ ಮಂಡಿಯ ಒಂದು ಕೋಣೆಯಲ್ಲಿ ಆಶ್ರಯ ಪಡೆದರೆ, ಇನ್ನೂ ಕೆಲವರ ಹಣಕಾಸಿನ ನೆರವು ಪಡೆದು ಉನ್ನತ ಸಾಧನೆ ಮಾಡಿದರು. ಇಂತಹ ಒಂದು ಸಾರ್ಥಕ ಜೀವವನ್ನು ಪರಿಚಯಿಸುವ ಪ್ರಯತ್ನ ಈ ಕೃತಿ ಎಂದು ಕೂಡಿಗೆ ಹೇಳಿದರು. ನ್ಯಾಯಮೂರ್ತಿ ರಾಮಾ ಜೋಯಿಸ್, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ಮಾಜಿ ಸಚಿವ ಬೇಗಾನೆ ರಾಮಯ್ಯ ಸೇರಿದಂತೆ ದೇವಪ್ಪಗೌಡರನ್ನು ಕಂಡವರು ತಮ್ಮ ನೆನಪುಗಳನ್ನು ದೇವಕೃಪ ಕೃತಿಯಲ್ಲಿ ಜೋಡಿಸಿದ್ದಾರೆ ಎಂದರು. ನ.17ರಂದು ನಡೆಯುವ ಕಾರ್ಯಕ್ರಮದಲ್ಲಿ ಗ್ರಂಥ ಕುರಿತು ಕೋಣಂದೂರು ಲಿಂಗಪ್ಪ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಗೌರಮ್ಮ ದೇವಪ್ಪಗೌಡ, ಕೆ.ಎನ್. ಮರುಳಾರಾದ್ಯ, ಎನ್.ಪಿ. ಕಿಟ್ಟಪ್ಪಗೌಡರು ಪಾಲ್ಗೊಳ್ಳುವರು. ಮಾಜಿ ಸಚಿವ ಬಿ.ಎ. ಜೀವಿಜಯ ಅಧ್ಯಕ್ಷತೆ ವಹಿಸುವರು ಎಂದರು. ಪತ್ರಿಕಾಗೋಷ್ಠಿಯಲ್ಲಿದ್ದ ಪ್ರೊ. ಪದ್ಮನಾಭ್, ಜಿಲ್ಲಾ ಒಕ್ಕಲಿಗರ ಸಂಘ ಸ್ಥಾಪನೆಯಲ್ಲಿಯೂ ಸಹ ದೇವಪ್ಪಗೌಡರ ಶ್ರಮ ಸ್ಮರಣಾರ್ಹ ಎಂದರು. ಗೋಷ್ಠಿಯಲ್ಲಿ ಎ.ಎಸ್. ವಿಶ್ವನಾಥ್, ಕಡಿದಾಳ್ ದಯಾನಂದ್, ಡಾ. ಬಿದರಗೋಡು ನಾಗೇಶ್ ಇದ್ದರು.