ಬರ ಎದುರಿಸಲು ಜಿಪಂ ಸಿದ್ಧತೆ
ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಎದುರಾಗಬಹುದಾದ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಪೂರ್ವಭಾವಿ ಮುನ್ನೆಚ್ಚರಿಕೆ ಕುರಿತಂತೆ ಈಗಿನಿಂದಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾಹಿತಿ ನೀಡಿದ್ದಾರೆ.
ಬರದ ಛಾಯೆ ಇತ್ತು: ಶುಕ್ರವಾರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಹಿಂದಿನ 2 ವರ್ಷಗಳ ಕಾಲ ಅಲ್ಲಲ್ಲಿ ಬರದ ಛಾಯೆ ಅಲ್ಲಲ್ಲಿ ಕಂಡುಬಂದಿದ್ದು, ಕುಡಿವ ನೀರಿನ ಸಮಸ್ಯೆ ಉಂಟಾಗಿತ್ತು. ಆದರೆ, ಈ ಬಾರಿ ಸಮಸ್ಯೆಯಾಗದೆಂಬ ವಿಶ್ವಾಸವಿದೆ. ಆದರೂ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಕಳೆದ ಬೇಸಿಗೆಯ ವೇಳೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾದ ಹಳ್ಳಿಗಳನ್ನು ಗುರುತಿಸಿ, ಈಬಾರಿ ಸಮಸ್ಯೆ ಉಂಟಾಗದಂತೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬ ಕುರಿತಂತೆ ಸಂಬಂಧಪಟ್ಟ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲೆಲ್ಲಿ ಸಮಸ್ಯೆ?: ಶಿವಮೊಗ್ಗ ತಾಲೂಕಿನ ಹಾರ್ನಳ್ಳಿ ಭಾಗ, ಸೊರಬ, ಸಾಗರ, ಭದ್ರಾವತಿ ತಾಲೂಕಿನ ಕೆಲ ಭಾಗಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುವ ಅಂದಾಜು ಮಾಡಲಾಗಿದೆ. ಕಳೆದ ವರ್ಷ ಕೂಡ ಈ ಭಾಗಳಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ಸ್ಥಳೀಯ ಜಲ ಸಂಗ್ರಹಗಳ ಪರಿಶೀಲನೆ, ದುರಸ್ತಿ ಇತ್ಯಾದಿ ಕಾರ್ಯದತ್ತ ಗಮನಕೊಡಲಾಗಿದೆ. ಬೇಸಿಗೆ ಸಂದರ್ಭದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ತುಂಬಿವೆ. ಈ ನೀರನ್ನು ಬೇಸಿಗೆಯವರೆಗೆ ಕಾಪಾಡಿಟ್ಟುಕೊಂಡರೆ ಜನ, ಜಾನುವಾರುಗಳಿಗೆ ತೊಂದರೆಯಾಗದು. ಈ ನಿಟ್ಟಿನಲ್ಲಿ ಕೆರೆಗಳಲ್ಲಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದ್ದು, ಸ್ಥಳೀಯ ಆಡಳಿತಗಳಿಗೆ ಈ ಸಂಬಂಧ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬತ್ತಿದ ನೀರು: ತೀರ್ಥಹಳ್ಳಿ ತಾಲೂಕಿನ ಹಲವೆಡೆ ಅಂತರ್ಜಲ ಕುಸಿತದಿಂದಾಗಿ ತೆರೆದ ಬಾವಿಯ ನೀರು ಬತ್ತಿದೆ. ಕೆರೆ, ಬಾವಿ ಸೇರಿದಂತೆ ಜಲಮೂಲಗಳ ಅಂತರ್ಜಲದ ಗಣಮಟ್ಟ ಹೆಚ್ಚಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಕೆರೆಗಳಿಗೆ ನೀರು ಹರಿದು ಬರುವ ಕಾಲುವೆಗಳ ಅಭಿವೃದ್ಧಿಪಡಿಸಲಾಗುವುದು. ಕೆರೆ ಒತ್ತುವರಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.