ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿವಿಧ ಬೇಡಿಕೆ ಈಡೇರಿಕೆಗೆ ಗ್ರಂಥಾಲಯ ನೌಕರರ ಒತ್ತಾಯ

Rashmi Kasaragodu
Updated On : 16 Nov 2013, 11:15 am

ಶಿವಮೊಗ್ಗ: ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಿ ಗ್ರಾಮೀಣ ಗ್ರಂಥಾಲಯಗಳ ನೌಕರರ ಸಂಘ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಿಕ್ಷಣ ಸಚಿವ ಕಿಮ್ಮೆನೆ ರತ್ನಾಕರ್ ಅವರ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯದ ಎಲ್ಲ 5,766 ಗ್ರಾಮ ಪಂಚಾಯಿತಿಗಳಲ್ಲಿಯೂ ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಎಲ್ಲಾ ಗ್ರಂಥಾಲಯಗಳ ಉಸ್ತುವಾರಿಗೆ ಮೇಲ್ವಿಚಾರಕರನ್ನು ಕಾನೂನಿನ್ವಯ ಮಾನದಂಡಗಳನ್ನು ಆಧರಿಸಿ ಆಯ್ಕೆ ಮಾಡಲಾಗಿದ್ದು, ಕಳೆದ 25 ವರ್ಷಗಳಿಂದ ನಿರಂತರವಾಗಿ ಪೂರ್ಣಾವಧಿ ನೌಕರರಾಗಿ ಸೇವೆ ಸಲ್ಲಿಸಿದ್ದರೂ ಯಾವುದೇ ಸೇವಾ ಭದ್ರತೆ ಇಲ್ಲ. ಬದಲಿಗೆ ಮಾಸಿಕ 2,500 ನೀಡುತ್ತಿದ್ದು, ಏಪ್ರಿಲ್ 2013ರಿಂದ ಸರ್ಕಾರ 5,500ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ ಎಂದು ಸಂಘ ತಿಳಿಸಿದೆ.
ಅರ್ಧ ವೇತನ ನೀಡಿ ಶೋಷಣೆ: ಗ್ರಾಮೀಣ ಭಾಗದಲ್ಲಿರುವ ಗ್ರಂಥಾಲಯಗಳನ್ನು ಗ್ರಾಮ ಪಂಚಾಯಿತಿ ಆಡಳಿತಕ್ಕೆ ವಹಿಸುವುದು, ಪುನ- ಮಾತೃ ಇಲಾಖೆಗೆ ವಹಿಸುವುದು ಹೀಗೆ ವರ್ಗಾವಣೆ ಆಟ ನಡೆಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಮೇಲ್ವಿಚಾರಕರಿಗೆ ಸರಿಯಾಗಿ ವೇತನ ಸಿಗದೆ ತೀವ್ರ ತೊಂದರೆಯಾಗುತ್ತಿತ್ತು. ಅಲ್ಲದೇ ಗ್ರಾ.ಪಂ ಅಧಿಕಾರಿಗಳಿಂದ ಗ್ರಂಥಾಲಯ ಮಹಿಳಾ ಮೇಲ್ವಿಚಾರಕರಿಗೆ ಲೈಂಗಿಕ ಕಿರುಕುಳ, ನೀಡುತ್ತಿರುವ ಗೌರವಧನವನ್ನು ಸರಿಯಾಗಿ ನೀಡುತ್ತಿರಲಿಲ್ಲ. ಕೆಲವೊಮ್ಮೆ ಗ್ರಾಮ ಪಂಚಾಯಿತಿಯವರು ಬೆದರಿಸಿ, ಪೂರ್ಣ ಹಣ ನೀಡದೆ ಅರ್ಧ ಹಣ ನೀಡಿ ಶೋಷಣೆ ಮಾಡುತ್ತಿದ್ದರು ಎಂದು ಸಂಘ ಆರೋಪಿಸಿದೆ.
ಈ ಸಂಬಂಧ ಮೇಲ್ವಿಚಾರಕರಾಗಿ ಕನಿಷ್ಠ ವೇತನ. ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ರಾಜ್ಯ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿತ್ತು. ಈ ವೇಳೆಯಲ್ಲಿ ಸರ್ಕಾರ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರು ಪಂಚಾಯಿತಿ ಸಿಬ್ಬಂದಿಗಳಲ್ಲ. ಅವರಿಗೆ ಕನಿಷ್ಠ ವೇತನ ನೀಡಲು ಸಾಧ್ಯವಿಲ್ಲ ಎಂದು ತಕಾರರು ಅರ್ಜಿ ಸಲ್ಲಿಸಿತ್ತು. ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. ಗ್ರಾಪಂ ವ್ಯಾಪ್ತಿಗೆ ಸೇರಿದ್ದರೂ ಸಿಬ್ಬಂದಿ ಎಂದು ಪರಿಗಣಿಸವುದಿಲ್ಲ. ಅಲ್ಲಿನ ನೌಕರರಿಗೆ ಸವಲತ್ತುಗಳು ನೀಡುವುದಿಲ್ಲ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನೌಕರರೂ ಆಗುವುದಿಲ್ಲ ಎಂಬ ತೀರ್ಮಾನಗಳಿಂದ ಮೇಲ್ವಿಚಾರಕರ ಬದುಕು ಶೋಚನೀಯವಾಗಲಿದೆ.
ಕಾರ್ಮಿಕರು ಬೀದಿಗೆ: ಇಲಾಖೆ ನೇಮಕಾತಿ ಪ್ರಕ್ರಿಯೆಯನ್ನು ಪರಿಷ್ಕರಿಸಿ, ಸೇವಾ ಅವಧಿ ಆಧರಿಸಿ ಆದ್ಯತೆ ನೀಡಬೇಕೆಂಬ ಸಂಘದ ಮನವಿಯನ್ನು ಕೈಬಿಟ್ಟು, ವಯೋವುತಿ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಂಡರು. ಇದರಿಂದ ನೂರಾರು ಜನ ವಯೋವುತಿ ಮೀರಿದ ಮೇಲ್ವಿಚಾರಕರು ಬೀದಿಗೆ ಬೀಳುವಂತಾಗಿದೆ ಎಂದು ಸಂಘ ತಿಳಿಸಿದೆ.
ಸಾರ್ವಜನಿಕ ದೂರುಗಳ ಆಧಾರದ ಮೇಲೆ ಇಲಾಖೆ ಅಧಿಕಾರಿಗಳು ಗ್ರಂಥಾಲಯಕ್ಕೆ ಭೇಟಿ ನೀಡಿದಾಗ ಗೈರು ಹಾಜರಾದ ಸುಮಾರು 200 ಜನ ಮೇಲ್ವಿಚಾರಕರನ್ನು ಕೆಲಸದಿಂದ ತೆಗೆಯಲಾಗಿದೆ. ಇವರು ದೀರ್ಘಕಾಲ ಸೇವೆ ಸಲ್ಲಿಸಿದ್ದರೂ ಸರ್ಕಾರ ಪರಿಗಣಿಸಿಲ್ಲ ಎಂದು ಸಂಘ ಆರೋಪಿಸಿದೆ.
ಬೇಡಿಕೆಗಳು: ಆದ್ದರಿಂದ ಸೇವೆಯನ್ನು ಕಾಯಂಗೊಳಿಸುವವರೆಗೂ ನಮ್ಮನ್ನು ದಿನಗೂಲಿ ವಿದೇಯಕದಡಿಯಲ್ಲಿ ತರಬೇಕು. ಗ್ರಂಥಾಲಯ ಇಲಾಖೆ ಬದಲಾದ ನೇಮಕಾತಿ ಸೇವಾ ನಿಯಮವಳಿಗಳನ್ನು ಪರಿಷ್ಕರಿಸಿ, ಸೇವಾ ಜೇಷ್ಠತೆ ಮೇರೆಗೆ ಪ್ರಾಶಸ್ತ್ಯ ನೀಡುವುದು. ಪಿಡಿಒಗಳು ದೃಢೀಕರಣ ಪತ್ರವನ್ನು ಕೈಬಿಡುವುದು ಹಾಗೂ ಸಂಪೂರ್ಣ ಆಡಳಿತವನ್ನು ಮಾತೃ ಇಲಾಖೆಗೆ ವಹಿಸಬೇಕು ಅಥವಾ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನೇ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವಿಲೀನಗೊಳಿಸಬೇಕು. ಅಲೆಮಾರಿ ಕೊಳಚೆ ಪ್ರದೇಶದ ಗ್ರಂಥಾಲಯಗಳ ಮೇಲ್ವಿಚಾರಕರನ್ನು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ವ್ಯಾಪ್ತಿಗೆ ಸೇರಿಸಲು ಒತ್ತಾಯಿಸಿದರು.
ರಜಾ ದಿನಗಳನ್ನು ಇಲಾಖೆ ನೌಕರರಿಗೆ ನೀಡಿದಂತೆ ಕೊಡಬೇಕು. ಮೇಲ್ವಿಚಾರಕರಿಗೆ ವಿನಾ- ಕಾರಣ ಕಿರುಕುಳ ನೀಡುವ ಇಲಾಖೆ ಅಧಿಕಾರಿ ಸಿಬ್ಬಂದಿಯನ್ನು ಬದಲಾಯಿಸಬೇಕು. ಈಗಾಗಲೇ ಅಕಾಲಿಕ ನಿಧನ ಹೊಂದಿದ ಮೇಲ್ವಿಚಾರಕರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡಬೇಕು ಹಾಗೂ ಅವರ ಕುಟುಂಬ ಸದಸ್ಯರೊಬ್ಬರಿಗೆ ಕೆಲಸ ನೀಡಬೇಕು. ಮಹಿಳಾ ಮೇಲ್ವಿಚಾರಕಿಯರಿಗೆ ಮೂರು ತಿಂಗಳು ಹೆರಿಗೆ ರಜೆಯನ್ನು ವೇತನ ಸಹಿತ ನೀಡುವುದು.
ಆಯಾ ಜಿಲ್ಲಾ ಕೇಂದ್ರದ ಗ್ರಂಥಾಲಯಗಳ ವ್ಯಾಪ್ತಿಯಲ್ಲಿ ಮೇಲ್ವಿಚಾರಕರಿಗೆ ಗ್ರಂಥಾಲಯ ವಿಜ್ಞಾನ ತರಬೇತಿ ನೀಡುವುದು. ಗ್ರಾಪಂ ಗ್ರಂಥಾಲಯಗಳಿಗೆ ಶಾಲಾ- ಕಾಲೇಜು ಪುಸ್ತಕಗಳನ್ನು (ಪಿಯುಸಿ, ಪದವಿ ಮತ್ತು ಸಿಇಟಿವರೆಗೆ ಪುಸ್ತಕಗಳು) ನೀಡಬೇಕು ಎಂದು ಸಂಘದ ಅಧ್ಯಕ್ಷ ಕೆ.ವಿ. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ.ಆರ್. ಶಾಂತಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement