ಇಂದು 99ನೇ ಸಾಹಿತ್ಯ ಹುಣ್ಣಿಮೆ
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ತಿಂಗಳ ಹುಣ್ಣಿಮೆಯಂದು ಏರ್ಪಡಿಸುವ ಸಾಹಿತ್ಯ ಹುಣ್ಣಿಮೆಯ 99ನೆಯ ತಿಂಗಳ ಕಾರ್ಯಕ್ರಮ ನ.17ರಂದು ಭಾನುವಾರ ಸಂಜೆ 6 ಗಂಟೆಗೆ ನಗರದ ಶರಾವತಿ ನಗರ ಬಡಾವಣೆಯಲ್ಲಿರುವ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ.
ಈ ಬಾರಿಯ ಸಾಹಿತ್ಯ ಹುಣ್ಣಿಮೆಯ ಆತಿಥ್ಯವನ್ನು ದೇವಂಗಿ ಟಿ. ಚಂದ್ರಶೇಖರ್ ದತ್ತಿ, ದೇವಂಗಿ ಡಿ.ಆರ್. ಮಾನಪ್ಪ ಸ್ಮಾರಕ ದತ್ತಿ ಮತ್ತು ದಿ. ಡಿ.ಆರ್. ರತ್ನಾಕರ್ ದತ್ತಿ ದಾನಿಗಳು ಸಂಯುಕ್ತವಾಗಿ ನೀಡಲಿದ್ದಾರೆ. ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ ಅವರು ಉದ್ಘಾಟಿಸಲಿದ್ದಾರೆ.
98ನೇ ಸಾಹಿತ್ಯ ಹುಣ್ಣಿಮೆ ಅತಿಥ್ಯ ನೀಡಿದ ನಗರ ದೇವಾಂಗ ಸಮಾಜದ ಅಧ್ಯಕ್ಷ ಪಿ.ಆರ್. ಗಿರಿಯಪ್ಪ ಭಾಗವಹಿಸಲಿದ್ದಾರೆ. ಸಾಹಿತಿ ಪ್ರೊ. ಶಿವಾರೆಡ್ಡಿ ಅವರು ಕುವೆಂಪು ಸಾಹಿತ್ಯದಲ್ಲಿನ ಮಹಿಳಾಪರ ನಿಲುವುಗಳನ್ನು ಕುರಿತು ಮಾತನಾಡುವರು. ಕುವೆಂಪು ಪ್ರತಿಷ್ಠಾನದ ದೇವಂಗಿ ಮನುದೇವ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ದೇವಂಗಿ ಮಾನಪ್ಪನವರ ಕೊಡುಗೆ ಕುರಿತು ಮಾತನಾಡಲಿದ್ದಾರೆ. ಡಾ. ಡಿ.ಸಿ. ಚಿತ್ರ, ಶ್ರೀನಿವಾಸ ಎಚ್. ಡಿ. ಮತ್ತು ಸಂಗಡಿಗರು ಗೀತಗಾಯನ ನಡೆಸಿಕೊಡಲಿದ್ದಾರೆ.
ಅಷ್ಟಾವಧಾನ: ಈ ಬಾರಿಯ ಕಾರ್ಯಕ್ರಮದಲ್ಲಿ ಎಂಟು ಮಂದಿ ಪ್ರಚ್ಛಕರು ಒಡ್ಡುವ ಸವಾಲುಗಳನ್ನು ಅವಧಾನಿಯೊಬ್ಬರು ಎದುರಿಸುವುದು ಅಷ್ಟಾವಧಾನ ಕಾರ್ಯಕ್ರಮ ನಡೆಯುವುದು.
ನಿಷೇಧಾಕ್ಷರಿಯಾಗಿ ಡಾ. ಶಾಂತಾರಾಮ ಪ್ರಭು, ಸಮಸ್ಯೆ ನಿವಾರಿಸಲು ಚಂದ್ರಶೇಖರ್, ದತ್ತಪದಿಯಾಗಿ ಡಾ. ಕೆ.ಜಿ. ವೆಂಕಟೇಶ್, ನ್ಯಸ್ತಾಕ್ಷರಿಯಾಗಿ ಅಂಬರೀಷ ಭಾರದ್ವಾಜ್, ಯಕ್ಷಗಾಯನಕ್ಕೆ ಜಿ.ಎಂ. ಸುಬ್ರಹ್ಮಣ್ಯ ಭಟ್ಟ, ಆಶು ಯಕ್ಷಪದ್ಯ ರಚನೆ ಮಾಡಲು ಎ.ವಿ. ಗಜಾನನಹೆಗ್ಡೆ, ಸಂಖ್ಯಾಬಂಧ ರಚಿಸಲು ಪ್ರಶಾಂತ ಬೆಂಕ್ಟಳ್ಳಿ, ಅಪ್ರಸ್ತುತ ಪ್ರಸಂಗಕ್ಕೆ ತೆಮೆಮನೆ ರಾಮಮೂರ್ತಿ, ಮದ್ದಲೆ ಸಹಕಾರಕ್ಕೆ ಜನಾರ್ದನರಾವ್ ಹಾಡಿಕೈ ಅವರು ಭಾಗವಹಿಸಲಿದ್ದಾರೆ.