ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇವರಿಗೆ ಹೆರಿಗೆ ರಜೆಯೇ ಇಲ್ಲ..!

Mainashree
Updated On : 17 Nov 2013, 10:49 am

ಕ.ಪ್ರ.ವಾರ್ತೆ, ಶಿವಮೊಗ್ಗ, ನ.16
ರಾಜ್ಯದಲ್ಲಿರುವ 5,766 ಗ್ರಾಪಂ ಗ್ರಂಥಾಲಯಗಳು, 300 ಗ್ರಾಮೀಣ ಅಲೆಮಾರಿ ಹಾಗೂ ಕೊಳಚೆ ಗ್ರಂಥಾಲಯಗಳಲ್ಲಿ ಶೇ.50ಕ್ಕೂ ಹೆಚ್ಚು ಮಹಿಳಾ ಮೇಲ್ವಿಚಾರಕರಿದ್ದಾರೆ. ಆದರೆ ಇವರಿಗೆ ಹೆರಿಗೆ ರಜೆ ಸೌಲಭ್ಯವೇ ಇಲ್ಲ. ಇಂತಹ ಸಂದರ್ಭ ಬಂದರೆ ಗೈರು ಹಾಜರಾಗಬೇಕು, ಇಲ್ಲವೇ ಅನಿವಾರ್ಯವಾಗಿ ಮತ್ತೊಬ್ಬರನ್ನು ನೋಡಿಕೊಳ್ಳುವಂತೆ ಹೇಳಬೇಕು.
ಗೈರು ಹಾಜರಾದರೆ ಜೀವನಾಧಾರವಾದ ಕೆಲಸ ಹೋದಂತೆಯೇ. ಮತ್ತೊಬ್ಬರನ್ನು ನೋಡಿಕೊಳ್ಳುವಂತೆ ಹೇಳುವುದು ಅತ್ಯಂತ ರಿಸ್ಕಿನ ಕೆಲಸ. ಮಹಿಳಾ ಮೇಲ್ವಿಚಾರಕರು ಏನು ಮಾಡಬೇಕು ಮೆಟರ್ನಿಟಿ ಬೆನಿಫಿಟ್ ಆಕ್ಟ್ 1961 ಅನ್ವಯ ಹೆರಿಗೆ ಅಥವಾ ಗರ್ಭಪಾತವಾದ ಯಾವುದೇ ಮಹಿಳೆ ನಂತರದ ಕನಿಷ್ಠ 6 ವಾರಗಳ ಕಾಲ ಕರ್ತವ್ಯಕ್ಕೆ ನಿಯೋಜಿಸುವಂತಿಲ್ಲ.
ಕಷ್ಟಕ್ಕೆ ಕೊನೆ ಇಲ್ಲ: ಇದೇ ಆಗಸ್ಟ್ 31ರಂದು ಸಂಸದೀಯ ಸಮಿತಿಯು ಸರ್ಕಾರಿ ನೌಕರರಿಗೆ 180 ದಿನಗಳ ಹೆರಿಗೆ ರಜೆ ನೀಡಬೇಕು ಎಂದು ಹೇಳಿದೆ. ಆದರೆ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕಿಯರಿಗೆ ಇದ್ಯಾವುದೇ ಸೌಲಭ್ಯವಿಲ್ಲ.
ಇವಿಷ್ಟೇ ಅಲ್ಲ, ಗ್ರಂಥಾಲಯ ಮೇಲ್ವಿಚಾರಕರು ಅನುಭವಿಸುತ್ತಿರುವ ಕಷ್ಟಗಳ ಪರಂಪರೆಗೆ ಕೊನೆಯೇ ಇಲ್ಲವಾಗಿದೆ. ಹಿಂದಿನ ಸರ್ಕಾರ ಇವರಿಗೆ ನೀಡುತ್ತಿದ್ದ ಗೌರವ ಧನವನ್ನು ಹೈಕೋರ್ಟ್ ಆದೇಶದ ಅನ್ವಯ ರು. 5,500 ಕ್ಕೆ ಹೆಚ್ಚಿಸಿದ್ದಷ್ಟೇ ಸಮಾಧಾನ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಗ್ರಾಮೀಣ ಗ್ರಂಥಾಲಯಗಳ ನೌಕರರ ಸಂಘವು ಗ್ರಂಥಾಲಯ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ.
ಜುಟ್ಟು ಗ್ರಾ.ಪಂ.ಗೆ: ರಾಜ್ಯ ಸರ್ಕಾರವು ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರಿಗೆ ಗೌರವ ಸಂಭಾವನೆ ಹೆಚ್ಚಿಸಿದ ಸಂದರ್ಭದಲ್ಲಿ ನೀಡಿದ ಆದೇಶದಲ್ಲಿ -ಇವರು ತೃಪ್ತಿಕರವಾಗಿ ಕೆಲಸ ಮಾಡಿದ್ದಾರೆ- ಎಂದು ಆಯಾ ಗ್ರಾಪಂ  ಕಾರ್ಯದರ್ಶಿ ಅಥವಾ ಪಿಡಿಒ ದೃಢೀಕರಿಸಿದ ನಂತರ ಸಂಭಾವನೆ ನೀಡಬೇಕೆಂದು ಸೂಚಿಸಿದೆ. ಈ ಕಾರಣದಿಂದ ಹಳ್ಳಿ ರಾಜಕೀಯ ಸುಳಿಗೆ ಸಿಲುಕಿ ಬಳಲುತ್ತಿದ್ದಾರೆ.
ಸಮಾನ ವೇತನವಿಲ್ಲ: ವಾಸ್ತವವಾಗಿ ಸಮಾನ ವೇತನವೆಂದು ಇವರಿಗೆ ರು. 9,600 ಸಿಗಬೇಕು. ಆದರೆ ಸಿಗುವ ರು. 5,500 ಗಳನ್ನೇ ಪಡೆದು ಕೆಲಸ ಮಾಡಲು ಗ್ರಂಥಾಲಯ ಇಲಾಖೆ, ಗ್ರಾಪಂಗಳು ಬಿಡದಂತಾಗಿದೆ.
ರಾಜ್ಯ ಸರ್ಕಾರಿ ನೌಕರರು ಮಾಡುವಂತೆ ಇವರೂ ಸಹ ಎಲ್ಲಾ ಕೆಲಸಗಳನ್ನು ಮಾಡಬೇಕು. ಆದರೆ ರಜೆ ಸೌಲಭ್ಯಗಳಿಲ್ಲ, ಸೂಕ್ತ ವೇತನವಿಲ್ಲ. ಸಣ್ಣಪುಟ್ಟ ಕಾರಣ ನೀಡಿ ಇದುವರೆಗೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಮೇಲ್ವಿಚಾರಕರನ್ನು ವಜಾ ಮಾಡಲಾಗಿದೆ. ಇಷ್ಟೇ ಸಂಖ್ಯೆಯ ಮೇಲ್ವಿಚಾರಕರು ನಿಧನರಾಗಿದ್ದಾರೆ. ಸಮಸ್ಯೆ ಮಾತ್ರ ಹಾಗೇ ಉಳಿದಿವೆ.
ಹಾಗಾಗಿ ಇವರ ಪ್ರಮುಖ ಬೇಡಿಕೆಯಾದ ಸೇವೆ ಖಾಯಂ ಮಾಡಿ ಸರ್ಕಾರಿ ನೌಕರರಂತೆ ಪರಿಗಣಿಸಬೇಕೆಂಬ ಬೇಡಿಕೆಯೊಂದಿಗೆ ಗ್ರಾಪಂ ಸುಳಿಯಿಂದಲೂ ಬಿಡಿಸುವಂತೆ ಕೋರಿಕೊಂಡಿದ್ದಾರೆ. ಸೇವೆ ಖಾಯಂ ಮಾಡುವ ವರೆಗೆ ತಮ್ಮನ್ನು ದಿನಗೂಲಿ ವಿಧೇಯಕದಡಿ ತರುವಂತೆ ಒತ್ತಾಯಿಸಿದ್ದಾರೆ.


 ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement