ದುರ್ನಾತ ಕುಡಿವ ದೌರ್ಭಾಗ್ಯ
ಕ.ಪ್ರ.ವಾರ್ತೆ ಸೊರಬ ನ.16
ಪಟ್ಟಣ ಪಂಚಾಯತಿ ಚುನಾವಣೆ ಕಳೆದು ಹಲವು ತಿಂಗಳಾದರೂ ಇನ್ನೂ ಚುನಾಯಿತ ಪ್ರತಿನಿಧಿಗಳಿಗೆ ಆಡಳಿತ ಹಸ್ತಾಂತರವಾಗಿಲ್ಲ. ಪ್ರಸ್ತುತ ಅಧಿಕಾರಿಗಳ ಆಡಳಿತವಿದ್ದು, ಪಟ್ಟಣ ನೈರ್ಮಲ್ಯದ ವಿಚಾರದಲ್ಲಿ ಯಾವುದೆ ಲಂಗುಲಗಾಮು ಇಲ್ಲದಂತಾಗಿದೆ.
ಇಲ್ಲಿನ ವಾರ್ಡ್ ನಂ 8ರ ಅಂತಿಮ, 10 ರ ಆರಂಭದಲ್ಲಿನ ಮಾರ್ಕೇಟ್ ಕೂಡು ರಸ್ತೆಯಲ್ಲಿ ಈಗ್ಗೆ 5 ವರ್ಷಗಳ ಹಿಂದೆ ನಿರ್ಮಿಸಿರುವ ಅವೃಜ್ಞಾನಿಕ ಡಕ್‌ಸ್ಲ್ಯಾಬ್ ನಿರುಪಯುಕ್ತವಾಗಿದ್ದು, ಸೆಂಟ್ರಿಂಗ್ ತೆಗೆಯದ ಕಾರಣ ನೀರು ನಿಂತು ಕುಸಿದಿದೆ.
ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಪಟ್ಟಣದ ಮುಖ್ಯರಸ್ತೆ, ಚಿಕ್ಕಪೇಟೆ, ಮಾರ್ಕೇಟ್ ರಸ್ತೆಯಿಂದ ಹರಿದು ಬರುವ ನೀರು, ತ್ಯಾಜ್ಯ ವಸ್ತುಗಳು ನಿಂತು ಮಡುಗಟ್ಟಿದೆ.
ಸಾಂಕ್ರಾಮಿಕ ರೋಗ ಭೀತಿ: ಸ್ಲ್ಯಾಬ್ ಕುಸಿದಿರುವುದರಿಂದ ಯಾವುದೇ ಕ್ಷಣದಲ್ಲು ಕೂಡ ಮಕ್ಕಳು, ಜಾನುವಾರುಗಳು, ರಾತ್ರಿ ವೇಳೆ ಜನಸಾಮಾನ್ಯರು ಸಹಾ ಕೈಕಾಲು ಮುರಿದುಕೊಳ್ಳುವ ಸಾಧ್ಯತೆ ಇದೆ. ಕೊಳಚೆ ನೀರಿನಿಂದಾಗಿ ದುರ್ವಾಸನೆ ವ್ಯಾಪಿಸಿದ್ದು, ನಿವಾಸಿಗಳು ಸಾಂಕ್ರಮಿಕ ರೋಗದ ಭೀತಿಯಲ್ಲಿದ್ದಾರೆ.
ವಾರ್ಡ್‌ನ ಜನಪ್ರತಿನಿಧಿಗಳನ್ನು ಕೇಳಿದರೆ ಈ ಚರಂಡಿ ನನ್ನ ವ್ಯಾಪ್ತಿಗೆ ಬರುವುದಿಲ್ಲವೆಂದು ಬೇಜವಾಬ್ದಾರಿ ಮಾತನಾಡುತ್ತಾರೆ. ಇಲ್ಲಿನ ನಿವಾಸಿಗಳಿಗೆ ಈ ತ್ಯಾಜ್ಯದ ಕೊಳಕು ಸಂಗ್ರಹ, ಡಕ್ ಸ್ಲ್ಯಾಬ್ ಕುಸಿದಿರುವುದು ಬಹು ದೊಡ್ಡ ತಲೆನೋವಾಗಿದ್ದು, ಯಾರನ್ನು ಕೇಳಬೇಕು, ಏನು ಮಾಡಬೇಕು ಅರಿಯದೆ ಚಿಂತಾಕ್ರಾಂತರಾಗಿದ್ದಾರೆ.
ಇಲ್ಲಿನ 7ಮತ್ತು 8 ನೇ ವಾರ್ಡಿನ ಹೋಟೆಲ್‌ಗೂ ಮನೆಗಳ ತ್ಯಾಜ್ಯ ಬಾಕ್ಸ್ ಚರಂಡಿಯಿಂದ ಹರಿದು ಅಂತಿಮವಾಗಿ 8ನೇ ವಾರ್ಡ್‌ನಿಂದ 10ನೇ ವಾರ್ಡಿಗೆ ಸೇರಲ್ಪಡುವ ಡಕ್ ಸ್ಲ್ಯಾಬ್ ಕಟ್ಟಿನಿಂತಿದೆ. ಹೀಗೆ ಸ್ಲಾಬ್ ಕಟ್ಟಿರುವುದರಿಂದ ಚರಂಡಿಗಳಲ್ಲಿ ಕೊಳಚೆ ನೀರು ಮಡುಗಟ್ಟಿದೆ. ಈಗಾಗಲೆ ಈ ರೀತಿ ಕಟ್ಟಿನಿಂತು ಹಲವು ತಿಂಗಳುಗಳೆ ಕಳೆದಿದ್ದು, ಸುತ್ತಲೆಲ್ಲ ದುರ್ನಾತ ಬೀರುತ್ತಿದೆ. 24 ತಾಸು ಈ ದುರ್ನಾತ ಕುಡಿಯುವ ದೌರ್ಭಾಗ್ಯ ಬಂದಿದೆ
-ನಿವಾಸಿ ರಾಜೇಶ್
ಈಗಾಗಲೆ ಪಪಂ ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೆ ನಿವಾಸಿಗಳು ಹಲವು ಬಾರಿ ತಂದಾಗಿದೆ. ಅಧಿಕಾರಿಗಳನ್ನು ಕೇಳಿದರೆ ತುಸು ಸುಧಾರಿಸಿ, ಎಂಬ ಸಿದ್ಧ ಉತ್ತರ ನೀಡುತ್ತಾರೆ. ನಮ್ಮ ಮಾತು ಕೇಳುವುದಿಲ್ಲ ಎಂಬ ಹತಾಶ ಮನೋಭಾವ ವ್ಯಕ್ತಪಡಿಸುತ್ತಾರೆ. ಇವರುಗಳ ಈ ಹತಾಶೆ, ಸುಧಾರಿಸುವಿಕೆ ಮಾತನ್ನಷ್ಟೆ ಕೇಳಿರುವ ಇಲ್ಲಿನ ನಿವಾಸಿಗಳ ಸಾಮಾನ್ಯ ಬದುಕು ಚಿಂದಿ ಚಿತ್ರಾನ್ನವಾಗಿದೆ
-ನಿವಾಸಿ ಮೆಹಬೂಬ್