ಸುದ್ದಿ ಸಂಕ್ಷೇಪ
17ರಂದು ಕನ್ನಡ ಸಾಹಿತ್ಯ, ನೃತ್ಯ ಕಾರ್ಯಕ್ರಮ
ಸಾಗರ: ಇಲ್ಲಿನ ನಾಟ್ಯತರಂಗ ಹಾಗೂ ಶಿವಮೊಗ್ಗದ ಶ್ರೀವಿಜಯ ಕಲಾನಿಕೇತನ ಆಶ್ರಯದಲ್ಲಿ ನ.17ರಂದು ಸಂಜೆ 6ಕ್ಕೆ ಪಟ್ಟಣದ ಶ್ರೀನಗರದಲ್ಲಿರುವ ನೃತ್ಯಭಾಸ್ಕರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಮತ್ತು ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿಷಯ ಕುರಿತು ಶ್ರೋತೃಗಳೊಂದಿಗೆ ಸಂವಾದ ಹಾಗೂ ಬೇಂದ್ರೆ ಅವರ ಭಾವಾನುನರ್ತನ ದುಂಬರಗಾಥಾ ನೃತ್ಯ ಕಾರ್ಯಕ್ರಮ ನಡೆಯಲಿದೆ. ನೃತ್ಯ ಕಾರ್ಯಕ್ರಮದಲ್ಲಿ ಡಾ.ಕೆ.ಎಸ್. ಪವಿತ್ರ ಮತ್ತು ಡಾ.ಕೆ.ಎಸ್. ಶುಭ್ರತಾ ಪಾಲ್ಗೊಳ್ಳಲಿದ್ದಾರೆ.
ಛಾಯಾಚಿತ್ರ ಪ್ರದರ್ಶನ
ಶಿವಮೊಗ್ಗ: ಡಾ. ಗುಲ್ವಾಡಿಯವರ ಜನ್ಮ ಶತಮಾನೋತ್ಸವ ಸಮಿತಿ ಜನವರಿ (2014)11ಮತ್ತು 12ರಂದು ಡಾ ಗುಲ್ವಾಡಿ ಅವರ ಸ್ಮರಣಾರ್ಥ ಇದೇ ಪ್ರಥಮ ಬಾರಿಗೆ ಅಖಿಲ ಭಾರತ ಮಟ್ಟದ ಛಾಯಚಿತ್ರ ಪ್ರದರ್ಶನ ಏರ್ಪಡಿಸಿದೆ. ಅಂತಾರಾಷ್ಟ್ರೀಯ ಛಾಯಾಯಾಚಿತ್ರಗ್ರಾಹಕರ ಛಾಯಾಚಿತ್ರಗಳ ಪ್ರದರ್ಶನ ಇರುತ್ತದೆ. ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಸ್ಥಳೀಯ ಸ್ಪರ್ಧಾಳುಗಳು ಪ್ರವೇಶ ಪತ್ರವನ್ನು ಸಮಿತಿಯ ಕಚೇರಿಯಲ್ಲಿ ಪಡೆಯಬಹುದು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ. ವಿವರಗಳಿಗಾಗಿ- 08182-223753.
ಯೂತ್ ಹಾಸ್ಟೆಲ್ ಸಭೆ
ಶಿವಮೊಗ್ಗ: ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕ ನ.17ರಂದು ಬೆಳಿಗ್ಗೆ 10 ಗಂಟೆಗೆ ರಾಜೇಂದ್ರ ನಗರದ ರೋಟರಿ ಪೂರ್ವ ಶಾಲೆಯಲ್ಲಿ ಘಟಕದ ಸರ್ವ ಸದಸ್ಯರ ಸಭೆ ಕರೆದಿದೆ. ಇದೇ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಲಿದ್ದು, ಇಂಡಿಯನ್ಸ್ ಸ್ಲೈಡ್ಸ್ ಚಿತ್ರದುರ್ಗದ ಜ್ಯೋತಿರಾಜ್ ಹಾಗೂ ಹವ್ಯಾಸಿ ಬರಹಗಾರರಾದ ರಂಜನಿ ದತ್ತಾತ್ರಿ ಅವರನ್ನು ಸನ್ಮಾನಿಸಲಾಗುವುದು ಎಂದು ಘಟಕದ ಅಧ್ಯಕ್ಷ ಪಿ. ದಯಾನಂದ ತಿಳಿಸಿದ್ದಾರೆ.
ತಾಪಂ ಉಪಾಧ್ಯಕ್ಷ ಸ್ಥಾನ ತೆರವು
ಭದ್ರಾವತಿ: ಇಲ್ಲಿನ ತಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಮೊದಲೇ ಒಡಂಬಡಿಕೆಯಾದಂತೆ ಉಪಾಧ್ಯಕ್ಷ ಸ್ಥಾನವನ್ನು ಗೌರಮ್ಮ ಅವರು ಉತ್ತರಾರ್ಧ ಅವಧಿಗೆ ಬಿಟ್ಟುಕೊಡದ ಬಗ್ಗೆ ಸದಸ್ಯರಲ್ಲಿ ಅಸಮಾಧಾನವಿದ್ದು, ಈ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರುಗಳು ಅವರ ಮೇಲೆ ಅವಿಶ್ವಾಸ ನಿರ್ಣಯ ತರಲು ಮುಂದಾಗಿದ್ದರು.
ಇದನ್ನು ಗಮನಿಸಿದ ಬಿಜೆಪಿ ಮುಖಂಡರುಗಳು ಗೌರಮ್ಮ ಅವರು ರಾಜಿನಾಮೆ ನೀಡುವಂತೆ ಮನವೊಲಿಸಿದ್ದರ ಪರಿಣಾಮ ಗೌರಮ್ಮ ಗುರುವಾರ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಉಪಾಧ್ಯಕ್ಷ ಸ್ಥಾನ ತೆರವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಒಮ್ಮತದ ಅಭ್ಯರ್ಥಿ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳಿವೆ.
20ರಂದು ಕನಕ ಜಯಂತಿ
ಕ.ಪ್ರ.ವಾರ್ತೆ, ಶಿವಮೊಗ್ಗ, ನ.16
ಕನಕದಾಸರ ಜಯಂತಿ ಸಮಾರಂಭವನ್ನು ನ.20ರಂದು ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಜಿಲ್ಲಾಡಳಿತ, ಜಿಪಂ, ನಗರಸಭೆ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಕನಕದಾಸರ ಜಯಂತಿ ಉದ್ಘಾಟಿಸುವರು. ವಿಪ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉಪಸ್ಥಿತರಿರುವರು. ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸುವರು ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸೊರಬ ಶಾಸಕ ಮಧು ಬಂಗಾರಪ್ಪ, ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ಭದ್ರಾವತಿ ಶಾಸಕ ಎಂ.ಜೆ. ಅಪ್ಪಾಜಿಗೌಡ, ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ನಗರಸಭೆ ಅಧ್ಯಕ್ಷೆ ಖುರ್ಷಿದಾ ಬಾನು ಪಾಲ್ಗೊಳ್ಳುವರು ಎಂದರು.