ಮುಳ್ಳಿನ 'ಹಾಸಿಗೆ'ಯಾದ ಕಾರ್ಮಿಕರ ಬಾಳು!
ಕ.ಪ್ರ.ವಾರ್ತೆ ಶಿವಮೊಗ್ಗ ನ.17
ಸರ್ಕಾರಿ ಸವಲತ್ತುಗಳಿಲ್ಲ, ರಿಯಾಯಿತಿ ದರದಲ್ಲಿ ಕಚ್ಚಾ ವಸ್ತುಗಳು ದೊರೆಯುವುದಿಲ್ಲ. ಎಲ್ಲರಂತೆ ನಮಗೆ ಆಶ್ರಯ ಮನೆಗಳಿಲ್ಲ, ಎಂದಿಗೂ ಅಸಂಘಟಿತ ಕಾರ್ಮಿಕರೆಂದು ಗುರುತಿಸಿಲ್ಲ, ಆದರೂ ಜೀವನ ಮಾಡಬೇಕು. ನಮ್ಮ ಹೊಟ್ಟೆ ಪಾಡಿಗಾಗಿ...
- ಇದು ಜಿಲ್ಲೆಯ ಹಾಸಿಗೆ ಕೆಲಸದ ಕೂಲಿ ಕಾರ್ಮಿಕರ ಗೋಳು...
ಆಧುನಿಕತೆಗೆ ತಕ್ಕಂತೆ ಹೊಸ ಮಾದರಿಯ ಹಾಸಿಗೆಗಳು ದಿನಕ್ಕೊಂದರಂತೆ ಮಾರುಕಟ್ಟೆ ಪ್ರವೇಶಿಸುತ್ತಿವೆ. ಇದರಿಂದ ದಶಕಗಳಿಂದ ಹಾಸಿಗೆ ಕೆಲಸವೇ ನಮ್ಮ ಜೀವನ. ಅದುವೇ ನಮ್ಮ ಕುಲಕಸುಬು ಎಂದು ಜೀವನ ಮಾಡುತ್ತಿರುವ ಹಾಸಿಗೆ ಕೂಲಿ ಕಾರ್ಮಿಕರ ಜೀವನ ಅಡಕತ್ತರಿಯಂತಾಗಿದೆ. ಇತ್ತ ಸರ್ಕಾರಿ ಸೌಲಭ್ಯಗಳಿಲ್ಲ. ಸಂಘ, ಸಂಸ್ಥೆಗಳ ನೆರವಿಲ್ಲ. ಆದರೂ ಊರಿನಿಂದ ಊರಿಗೆ ಹೋಗಿ ಕುಲಕಸುಬನ್ನು ಪ್ರಾಮಾಣಿಕತೆಯಿಂದ ಮಾಡುವ ಕಾರ್ಮಿಕರನ್ನು ಮಾತ್ರ ಸಮಾಜ ಕಡೆಗಣಿಸಿದೆ. ಇಂದು ಅವರ ಸ್ಥಿತಿ ಎನ್ನಾಗಿದೆ ಎಂಬ ಬಗ್ಗೆ ಸರ್ಕಾರವಾಗಲಿ, ಜನಪ್ರತಿನಿಧಿಗಳಾಲಿ ತಲೆಕೆಡಿಸಿಕೊಂಡಿಲ್ಲ.
ಕಾರ್ಮಿಕರ ಗೋಳು: ಊರಿನಿಂದ ಊರಿಗೆ ತಮ್ಮ ಕುಲಕಸುಬನ್ನು ಮಾಡುವ ಕಾರ್ಮಿಕರಿಗೆ ಊರಿನ ಸಮುದಾಯ ಭವನ, ಶಾಲಾ, ಕಾಲೇಜು ಹಾಗೂ ಬಸ್ ನಿಲ್ದಾಣಗಳೇ ಆಶ್ರಯ ತಾಣ. ತಿಂಗಳುಗಟ್ಟಲೇ ಊರೂರು ತಿರುಗಿದರೂ ಸಿಗುವುದು ಅಲ್ಪ. ಒಂದು ಹಾಸಿಗೆಯ ಹತ್ತಿಯನ್ನು ಸಿದ್ಧ ಮಾಡಿ ಹೊಲಿಗೆ ಹಾಕಿ ಕೊಡುವುದಕ್ಕೆ ಪಡೆಯುವುದು 40ರಿಂದ 70 ಮಾತ್ರ. ವಾರಗಟ್ಟಲೆ ದುಡಿದರೂ ಸಿಗುವುದು 300- 400. ಈ ಅಲ್ಪ ಮೊತ್ತದಿಂದ ಅಂದಂದಿನ ತುತ್ತಿನ ಚೀಲ ತುಂಬಿಸಿಕೊಳ್ಳಬೇಕು. ಅದರೊಂದಿಗೆ ಮನೆಗೂ ನೀಡಬೇಕು. ಈ ರೀತಿಯ ಅಲೆಮಾರಿ ಜೀವನ ಸಾಗಿಸುತ್ತಿರುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಕೂಡ ಸರ್ಕಾರ ಪರಿಗಣಿಸಿಲ್ಲ ಎಂಬುದು ಹಾಸಿಗೆ ಕಾರ್ಮಿಕರ ನೋವಿನ ನುಡಿಗಳು.
ಮೂರಾಬಟ್ಟೆ: ಆಧುನಿಕ ಮಾರುಕಟ್ಟೆಯಲ್ಲಿ ಕುರ್ಲಾನ್, ಡ್ಯೂರೊಪ್ಲೆಕ್ಸ್ ಸೇರಿದಂತೆ ಹತ್ತಾರು ಕಂಪನಿಗಳ ಹಾಸಿಗೆಗಳು ರಾರಾಜಿಸುತ್ತವೆ. ಇವು ಮಾರುಕಟ್ಟೆಗೆ ಬಂದಿರುವುದರಿಂದ ನಮ್ಮ ಜೀವನ ಮೂರಾಬಟ್ಟೆಯಾಗಿದೆ. ಮೊದಲಿನಂತೆ ಹಳೇ ಹಾಸಿಗೆಗಳನ್ನು ಮರು ಸಿದ್ಧಪಡಿಸುವಿಕೆ ಚಟುವಟಿಕೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಇನ್ನೂ ಹೇಳಬೇಕೆಂದರೆ ಮಳೆಗಾಲದಲ್ಲಿ ಕೆಲಸವೇ ಇರುವುದಿಲ್ಲ. ಈ ಸಂಬಂಧವಾಗಿ ಹಾಸಿಗೆ ತಯಾರು ಮಾಡುವ ಕೂಲಿಯನ್ನು ಕಡಿಮೆ ಮಾಡಿಕೊಂಡು ಊರೂರು ತಿರುಗಬೇಕಾಯಿತು.
ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅಲ್ಲೊಂದು ಇಲ್ಲೊಂದು ಹಳೇ ಹಾಸಿಗೆಯನ್ನು ಮರು ಸಿದ್ಧ ಮಾಡಿಕೊಳ್ಳುತ್ತಾರೆ. ಅದು ಕೂಡ ಚೌಕಾಸಿ ಮಾಡಿ ಹಣ ನೀಡುತ್ತಾರೆ. ಅದು ಕೆಲಸವಾದ ಮೇಲೆ. ಇದರಿಂದ ಬಹಳ ನಷ್ಟವಾಗುತ್ತದೆ ಎನ್ನುತ್ತಾರೆ ಹಾಸಿಗೆ ಕೆಲಸದ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಜಾಕ್ ಸಾಬ್.
ಸರ್ಕಾರಕ್ಕೆ ಅಹವಾಲು
ಶಿವಮೊಗ್ಗ ನಗರದಲ್ಲಿರುವ 150ಕ್ಕೂ ಹೆಚ್ಚು ಕಾರ್ಮಿಕರು ಸಂಘವೊಂದನ್ನು ಸ್ಥಾಪನೆ ಮಾಡಿಕೊಂಡು ಸರ್ಕಾರಕ್ಕೆ ಅಹವಾಲು ನೀಡಲು ಮುಂದಾಗಿದ್ದಾರೆ. ಕಡಿಮೆ ದರದಲ್ಲಿ ಹತ್ತಿ, ನೂಲು, ಯಂತ್ರ ಹಾಗೂ ಇತರೆ ಕಾರ್ಮಿಕರಿಗೆ ನೀಡಿದಂತೆ ನಮಗೂ ಆಶ್ರಯ ಯೋಜನೆಯಲ್ಲಿ ಮನೆಗಳು, ಅಸಂಘಟಿತ ಕಾರ್ಮಿಕ ವಿಭಾಗದಲ್ಲಿ ನಮ್ಮನ್ನು ಸೇರಿಸಿಕೊಳ್ಳುವಂತೆ ಸರ್ಕಾರನ್ನು ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಒತ್ತಾಯಿಸಲಾಗುವುದು ಎನ್ನುತ್ತಾರೆ ರಜಾಕ್ ಸಾಬ್.
ಇಂದು ಉದ್ಘಾಟನೆ
ಹಾಸಿಗೆ ಕೆಲಸದ ಕೂಲಿ ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭವನ್ನು ನ. 18ರಂದು ಸಂಜೆ 4.30ಕ್ಕೆ ನ್ಯೂಮಂಡ್ಲಿಯ ಅರಬೀಯಾ ಮದರಸದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸಂಘ ಉದ್ಘಾಟಿಸುವರು. ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಮೋಹನ್ಕುಮಾರ್ ಎನ್.