ರಸ್ತೆ ಅವ್ಯವಸ್ಥೆ: ಡಾಂಬರ್ ಹಾಕಿ ಪ್ರತಿಭಟನೆ
ಹೊಸನಗರ: ಅಧಿಕಾರ ಹಿಡಿದು 4 ತಿಂಗಳಿಗೆ ಸರ್ಕಾರ ದಿವಾಳಿಯಾಗಿದೆ. ರಸ್ತೆಗಳ ಗುಂಡಿ ತುಂಬಲೂ ಸರ್ಕಾರದ ಕೈಯಲ್ಲಿ ಕವಡೆ ಕಾಸಿಲ್ಲ ಎಂದು ಆರೋಪಿಸಿದ ಜೆಡಿಎಸ್ ಕಾರ್ಯಕರ್ತರು, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಪಟ್ಟಣದ ಪ್ರಮುಖ ರಸ್ತೆಯ ಗುಂಡಿಗಳನ್ನು ತುಂಬಿ, ಡಾಂಬರ್ ಹಾಕಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಇಲ್ಲಿನ ಬಸ್ ನಿಲ್ದಾಣ ಪಕ್ಕದ ಹೆದ್ದಾರಿಯ ಗುಂಡಿ ಗುಡಿಸಿ ಡಾಂಬರ್, ಜಲ್ಲಿ ಹಾಕಿ ಮುಚ್ಚಿದರು.
ಗುಂಡಿ ಮುಚ್ಚುವ ಕಾರ್ಯಚರಣೆಯುದ್ದಕ್ಕೂ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಮಾತನಾಡಿದ ಜೆಡಿಎಸ್ ಘಟಕದ ಅಧ್ಯಕ್ಷ ಬಿ.ಜಿ. ನಾಗರಾಜ್, ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಹೊಸ ರಸ್ತೆ ಮಾಡುವುದಿರಲಿ, ಗುಂಡಿ ಮುಚ್ಚುವ ಕೆಲಸಕ್ಕೂ ದುಡ್ಡಿಲ್ಲ. ಜನಪ್ರತಿನಿಧಿಗಳು ಗುಂಡಿಗಳನ್ನು ನೋಡುತ್ತಿಲ್ಲ.
ಅವರಿಗೆ ಇದರ ಗೋಜಿಲ್ಲ. ರಾಜಧಾನಿಯಲ್ಲಿ ಆರಾಮಾಗಿದ್ದಾರೆ ಎಂದು ಆರೋಪಿಸಿದರು. ಪಕ್ಷದ ಮುಖಂಡರಾದ ಶ್ರೀಪತಿರಾವ್, ಶ್ರೀಧರ ಉಡುಪ, ಸುಮತಿ ಆರ್. ಪೂಜಾರ್, ಶುಭಕರ್ ಪೂಜಾರ್, ಅಶ್ವಿನಿಕುಮಾರ್, ಸಯ್ಯದ್, ಕೃಷ್ಣವೇಣಿ, ಚಂದ್ರಿಕಾ ಮಹೇಶ್ ತಲನೇರಿ ನಾಗೇಶ್ ಮತ್ತಿತರರು ಹಾಜರಿದ್ದರು.