ನ್ಯಾ.ಕೊಣ್ಣರ್ ನಿಧನಕ್ಕೆ ವಕೀಲರ ಸಂತಾಪ
ಸೊರಬ: ಈ ಮೊದಲು ಇಲ್ಲಿನ ಜೆಎಂಎಫ್ಸಿ ಹಿರಿಯ ವಿಭಾಗದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಕೆ.ಹೆಚ್. ಕೊಣ್ಣರ್ ಇವರ ನಿಧನಕ್ಕೆ ವಕೀಲರ ಸಂಘ ಸಭೆ ಸೇರಿ ಸಂತಾಪ ಸೂಚಿಸಿದೆ.
ಕೆಜಿಎಫ್ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ನಿಧನರಾದ ಸುದ್ದಿ ತಿಳಿದ ವಕೀಲರ ಸಂಘದ ಸರ್ವ ಸದಸ್ಯರು ಸೋಮವಾರ ಸಭೆ ಸೇರಿ ನ್ಯಾಯಾಲಯದ ಕಲಾಪದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡರು.
ಸೊರಬ ನ್ಯಾಯಾಲಯದಲ್ಲಿ 2007 ರಿಂದ 2009 ರವರೆಗೆ ಸೇವೆ ಸಲ್ಲಿಸಿದ ಇವರು ವಕೀಲರ ಸಂಘದ ಎಲ್ಲಾ ಹಿರಿಯ, ಮತ್ತು ಕಿರಿಯ ವಕೀಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ನ್ಯಾಯಾಲಯದ ಕಲಾಪಗಳಿಗೆ ಹಾಗೂ ಪ್ರಕರಣಗಳ ತ್ವರಿತ ವಿಲೇವಾರಿಗೆ ಇವರು ಹೆಸರುವಾಸಿಯಾಗಿದ್ದರು. ಸೊರಬದಿಂದ ಶಿವಮೊಗ್ಗಕ್ಕೆ ವರ್ಗವಾದ ಇವರು ಅಲ್ಲಿಯ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ, ಅಲ್ಲಿಂದ ಕೋಲಾರ ಜಿಲ್ಲಾ ನ್ಯಾಯಾಲಯಕ್ಕೆ ವರ್ಗವಾಗಿದ್ದರು.
ಹಿರಿಯ ವಿಭಾಗದ ನ್ಯಾಯಾಧೀಶೆ ಶೋಭಾವತಿ, ಕಿರಿಯ ವಿಭಾಗದ ನ್ಯಾಯಾಧೀಶೆ ಅನಿತಾ ವಕೀಲರ ಸಂಘದ ಅಧ್ಯಕ್ಷ ಕೆ.ಹೆಚ್. ತಮ್ಮಣ್ಣಪ್ಪ, ಕಾರ್ಯದರ್ಶಿ ರಂಗನಾಥ ಚಕ್ರಪಾಣಿ, ಉಪಾಧ್ಯಕ್ಷ ಜಯಶೀಲಗೌಡ, ಮಾಂಗ್ಲಿ, ವಕೀಲರಾದ ಸಿ. ಶಿವಕುಮಾರ್, ಇಂದೂಧರ ಒಡೆಯರ್, ರುಕ್ಮಾಂಗಧರಪ್ಪ, ಎಂ. ನಾಗಪ್ಪ, ರುದ್ರಪ್ಪ, ಪುಟ್ಟಸ್ವಾಮಿ, ದೇಸಾಯಿ, ಪಾಟೀಲ್, ರಾಮಪ್ಪ, ಉಭಯ ನ್ಯಾಯಾಲಯದ ಸಿಬ್ಬಂದಿಗಳು ಮೊದಲಾದವರಿದ್ದರು.