ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಆಕ್ರೋಶ
ಶಿರಾಳಕೊಪ್ಪ: ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಎಂಬಿಬಿಎಸ್ ವೈದ್ಯರನ್ನು ನೇಮಿಸಿ ಎಂದು ಡಿಎಚ್ಒ ಅವರನ್ನು ಕೇಳಿದರೆ ನಕಾರಾತ್ಮಕವಾಗಿ ಉತ್ತರಿಸುತ್ತಿದ್ದಾರೆ. ಹಾಗೆಯೇ ಡಿ, ದರ್ಜೆ ನೌಕರರನ್ನು ನೇಮಿಸಿ ಎಂದರೆ ನೀವೇ ಹುಡುಕಿಕೊಡಿ ಎಂದು ತಿಳಿಸುತ್ತಿದ್ದಾರೆ. ಹಾಗಾದರೆ ನಾವು ಇಲ್ಲಿಯ ವ್ಯವಸ್ಥೆ ಬಗ್ಗೆ ಯಾರನ್ನು ಕೇಳಬೇಕು ಎಂದು ಉಡಗಣಿ ತಾಳಗುಂದ ಹೋಬಳಿ ರೈತ ಹೋರಾಟ ಸಮಿತಿ ಪ್ರಶ್ನಿಸಿದೆ.
ಸೋಮವಾರ ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಪ್ರಶ್ನಿಸಲು ಹೋದ ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜಣ್ಣ, ಹಿರಿಯ ರೈತ ಹೋರಾಟಗಾರ ವೀರಣ್ಣ ಹಾಗೂ ಬಸವನಗೌಡ ಮತ್ತು ಇತರರಿಗೆ ಡಿಎಚ್ಒ ಅವರು ನಕಾರಾತ್ಮಕ ಉತ್ತರಿಸಿದ್ದು, ಈ ರೀತಿ ಬೇಜವಾಬ್ದಾರಿ ಉತ್ತರ ಕೊಟ್ಟರೆ ಹೋರಾಟ ಕೈಗೆತ್ತಿಕೊಳ್ಳ ಬೇಕಾದೀತು ಎಂದು ಎಚ್ಚರಿಸಿದರು.
ಹರಿದ ಹಾಸುಗೆ: ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಬೆಡ್ಶೀಟ್ ಇಲ್ಲದೇ ಹರಿದ ಹಾಸುಗೆ ಮೇಲೆ ಮಲಗಿಸುತ್ತಿದ್ದಾರೆ ಎಂದು ಆರೋಪಿಸಿದ ರೈತ ನಾಯಕರು, ನಂತರ ವೈದ್ಯಾಧಿಕಾರಿ ಡಾ. ಮೋಹನ್ ಅವರ ಉತ್ತರದಿಂದ ಸಮಾಧಾನ ಹೊಂದಿ ತಕ್ಷಣ ವ್ಯವಸ್ಥೆ ಸರಿಪಡಿಸಬೇಕು ಎಂದರು.
ರೈತಮುಖಂಡರು ವೈದ್ಯಾಧಿಕಾರಿಗಳ ಕೊಠಡಿಗೆ ಹೋದಾಗ ವೈದ್ಯಾಧಿಕಾರಿಗಳು ಇರಲಿಲ್ಲ. ಆದರೆ ಅವರ ಕುರ್ಚಿಯನ್ನು ತಿರುಗಿಸಿ ಇಟ್ಟಿರುವುದನ್ನು ಪ್ರಶ್ನಿಸಿ ಮಧ್ಯಾಹ್ನದರೂ ಯಾರೊಬ್ಬರೂ ಈ ಕುರ್ಚಿ ಸರಿಯಾಗಿ ಇಡದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಇಲ್ಲಿಗೆ ಬರುವ ರೋಗಿಗಳನ್ನು ಹೇಗೆ ನೋಡಿಕೊಳ್ಳು ತ್ತೀರಿ ಎಂದು ಪ್ರಶ್ನಿಸಿದರು.
ಬೇರೆ ಕೆಲಸಕ್ಕೆಂದು ತೆರಳಿದ್ದ ಆರೋಗ್ಯಾಧಿಕಾರಿ ಮೋಹನ ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರ ವಹಿಸಲಾಗುವುದು ಎಂದರು.