ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಳಿ ತಪ್ಪಿದ ವಸತಿ ಯೋಜನೆ ಸಾಲ ವಸೂಲಾತಿ

Rashmi Kasaragodu
Updated On : 19 Nov 2013, 10:58 am

ಶಿವಮೊಗ್ಗ: ಸರ್ಕಾರ ಬದಲಾದಂತೆ ಹೊಸ ಹೊಸ ಹೆಸರಿಟ್ಟುಕೊಂಡು ಅನೇಕ ವಸತಿ ಯೋಜನೆಗಳು ಬಂದಿವೆ. ಆಶ್ರಯ, ಇಂದಿರಾ ಆವಾಜ್, ಅಂಬೇಡ್ಕರ್, ನಗರ ಆಶ್ರಯ, ಗ್ರಾಮೀಣ ಆಶ್ರಯ, ಜನತಾ, ಭಾಗ್ಯಮಂದಿರ, ನೆರಳಿನ ಭಾಗ್ಯ, ಪಿಎಂಜಿವೈ ಹೀಗೆ ಹತ್ತಾರು ಯೋಜನೆಗಳು. ಈ ಯೋಜನೆಗಳಡಿ ಮನೆ ಕಟ್ಟಿಕೊಳ್ಳಲು ಸರ್ಕಾರ ಫಲಾನುಭವಿಗಳಿಗೆ ನೀಡಿದ ಸಾಲದ ವಸೂಲಾತಿ ವ್ಯವಸ್ಥೆ ಮಾತ್ರ ಹದಗೆಟ್ಟಿದೆ.
1994ರಿಂದೀಚೆಗೆ ಸಾವಿರಾರು ಕೋಟಿ ರುಪಾಯಿ ಸಾಲ ಇನ್ನೂ ಸರ್ಕಾರಕ್ಕೆ ಮರುಪಾವತಿಯೇ ಆಗಿಲ್ಲ. ಈ ಮಧ್ಯೆ ಸಾಲ ವಸೂಲಾತಿ ಉದ್ದೇಶದಿಂದ ಈ ಹಿಂದಿನ ಬಿಜೆಪಿ ಸರ್ಕಾರ ನನ್ನ ಮನೆ ನನ್ನ ಸ್ವತ್ತು ಯೋಜನೆ ಜಾರಿಗೆ ತಂದಿತು.
 ಸಾಲ ಮರುಪಾವತಿ ಮಾಡಿ ಸ್ವತ್ತಿನ ಮಾಲಿಕತ್ವವನ್ನು ಫಲಾನುಭವಿ ಹೆಸರಿಗೆ ಮಾಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಯೋಜನೆ ಜಾರಿಯಾಯಿತು. ಜೊತೆಗೆ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೂ 2010ರಲ್ಲಿ ಸರ್ಕಾರ ಅನುಮೋದನೆ ನೀಡಿತು.
 10 ಕೋಟಿ ವಸೂಲಿ: ಹಾಗೆಯೇ ಸಾಲ ವಸೂಲಾತಿ ಸರ್ಕಾರಿ ವ್ಯವಸ್ಥೆಯಿಂದ ಸಾಧ್ಯವಿಲ್ಲವೆಂದೆಣಿಸಿ ಟೆಂಡರ್ ಮೂಲಕ ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿತು.
 ಆ ವರೆಗೆ ಸರ್ಕಾರ 15 ವರ್ಷದಲ್ಲಿ ಸುಮಾರು 10 ಕೋಟಿಯಷ್ಟು ಸಾಲದ ಮೊತ್ತವನ್ನಷ್ಟೇ ವಸೂಲಿ ಮಾಡಿತ್ತು. ಖಾಸಗಿ ಸಂಸ್ಥೆಗೆ ಕಮಿಷನ್ ಆಧಾರದಲ್ಲಿ ಸಾಲ ವಸೂಲಾತಿಗೆ ವಹಿಸಿದ ನಂತರ ಒಂದೇ ವರ್ಷದಲ್ಲಿ 50 ಕೋಟಿ ಸರ್ಕಾರಕ್ಕೆ ಸಾಲದ ಹಣ ಸಂದಾಯವಾಯಿತು.
  ಜೊತೆಗೆ ನೂರಾರು ಮಂದಿ ತಮ್ಮ ಆಸ್ತಿಯ ಹಕ್ಕನ್ನು ಪಡೆದುಕೊಂಡರು. (ವಾಸ್ತವವಾಗಿ ಸಾಲ ನೀಡಿದ್ದರಿಂದ ನಿವೇಶನ ಮತ್ತು ಮನೆ ಸ್ಥಳೀಯ ಸಂಸ್ಥೆ ಪೌರಾಯುಕ್ತರ, ಮುಖ್ಯಾಧಿಕಾರಿ ಹೆಸರಿನಲ್ಲಿ ಅಡಮಾನ ಆಗಿರುತ್ತದೆ) ಸಾಲ ಕಟ್ಟುವಂತೆ ಫಲಾನುಭವಿಯ ಮೇಲೆ ಒತ್ತಡ ಹೇರದೇ ಮನವೊಲಿಸಿದ ಪ್ರತಿಫಲ ಇದು. ಸರ್ಕಾರದ ಉದ್ದೇಶವೂ ಅದೇ ಆಗಿತ್ತು.
ಆದರೀಗ: ಈ ಮಧ್ಯೆ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗೊಂದಲ ಏರ್ಪಟ್ಟಿತು. ರಾಜೀವ್ಗಾಂಧಿ ಗ್ರಾಮೀಣ ವಸತಿ ಆದೇಶವೊಂದನ್ನು ಹೊರಡಿಸಿ, ಅಸಲಿನೊಂದಿಗೆ ಬಡ್ಡಿಯನ್ನೂ ಫಲಾನುಭವಿಗಳಿಂದ ವಸೂಲಿ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಆದೇಶಿಸಿದರು.
ವಾಸ್ತವವಾಗಿ 2010ರಲ್ಲಿ ಬಡ್ಡಿ ಮನ್ನಾ ಮಾಡಿದ ನಂತರ ಪರಿಷ್ಕೃತ ಆದೇಶ ಇದ್ದರೂ  ಸಹ, 2003ರಲ್ಲಿ ಮಂಡಳಿಯು ಮಾಡಿದ್ದ ಹಳೇ ಆದೇಶದಂತೆ (ಎಂಡಿಆರ್ಜಿಆರ್ಎಚ್ಸಿಎಲ್ 01 ಜಿಇಎನ್ 11 2002) ಶೇ.11ಬಡ್ಡಿಯೊಂದಿಗೆ ಅಸಲು ವಸೂಲು ಮಾಡಿಸುವಂತೆ ಜಿಲ್ಲಾಡಳಿತಗಳಿಗೆ ಆದೇಶ ನೀಡಿತು.
 ಹೀಗಾಗಿ ಹಣ ಕಟ್ಟಲು ಮುಂದೆ ಬಂದ ಫಲಾನುಭವಿಗಳೂ ಬಡ್ಡಿ ಸಹಿತ ಕಟ್ಟದ ಬೇಕಾದ ಹಣದ ಪ್ರಮಾಣ ಕಂಡು ಹಿಂದೆ ಸರಿದರು. ಎಲ್ಲರಿಗೂ ಆಗಿದ್ದೇ ನಮಗೂ ಆಗುತ್ತದೆ, ಸಾಲ ಕಟ್ಟುವುದೇ ಬೇಡವೆಂಬ ತೀರ್ಮಾನಕ್ಕೆ ಬಂದರು.
6 ಸಾವಿರ ಪ್ರಕರಣ: ಕೆಲವು ಜಿಲ್ಲೆಗಳಲ್ಲಿ ಬಡ್ಡಿ ಸಹಿತ ಹಣ ವಸೂಲಿ ಮಾಡಿದ್ದರೆ, ಮತ್ತೆ ಕೆಲವು ಕಡೆ ಬಡ್ಡಿ ರಹಿತವಾಗಿ ಸಾಲದ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ.
ಒಟ್ಟಾರೆ 6 ಸಾವಿರ ಪ್ರಕರಣಗಳ ಮನವೊಲಿಕೆ ಕಾರ್ಯ ನಡೆದು ಸಾಲ ಮರುಪಾವತಿಯಾಗಿದ್ದರೆ, ಇದೀಗ ಈ ಪ್ರಕ್ರಿಯೆಯೇ ನಿಂತು ಹೋಗಿದೆ.
  ಶಿವಮೊಗ್ಗ ಜಿಲ್ಲೆ ಸೇರಿದಂತೆ ಅನೇಕಕಡೆ ಸಾಲ ಮರುಪಾವತಿ ಮಾಡಿ ಆಸ್ತಿಯ ಹಕ್ಕನ್ನು ಪಡೆಯುವ ಫಲಾನುಭವಿಗಳ ಆಸೆಗೆ ಕೊಡಲಿಪೆಟ್ಟು ಬಿದ್ದಿದೆ.
ಆದರೀಗ ನೋಂದಣಿ ಪ್ರಕ್ರಿಯೆ ನಿಂತಿದ್ದು, ಹಣ ಕಟ್ಟಿ ನೋಂದಣಿ ಮಾಡಿಸಿಕೊಳ್ಳಲು ಶಿವಮೊಗ್ಗ ಜಿಲ್ಲೆಯಲ್ಲೇ ನೂರಾರು ಫಲಾನುಭವಿಗಳು ಎದುರು ನೋಡುತ್ತಿದ್ದಾರೆ. ಹಣ ಕಟ್ಟಿದವರಿಗೆ ಆಸ್ತಿಯನ್ನು ಮರು ನೋಂದಣಿ ಮಾಡಿಸುವ ಪ್ರಕ್ರಿಯೆ ಏಕೆ ನಡೆಯುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸರ್ಕಾರದಿಂದ ನಮಗೆ ಯಾವುದೇ ಸ್ಪಷ್ಟ ನಿರ್ದೇಶನ ಬಂದಿಲ್ಲ ಎನ್ನುತ್ತಾರೆ.


ಸಾಲ ವಸೂಲಾತಿ ಬಂದ್
ಸಾಲ ವಸೂಲಾತಿ ಮಾಡಲು ಹಿಂದಿನ ಸರ್ಕಾರ ಖಾಸಗಿ ಸಂಸ್ಥೆಗೆ ಜವಾಬ್ದಾರಿ ನೀಡಿತ್ತು. ಆದರೆ, ಹೊಸ ಸರ್ಕಾರ ಯಾವುದೇ ಪ್ರಕ್ರಿಯೆ ಮಾಡಬೇಡಿ ಎಂದು ಖಾಸಗಿ ಸಂಸ್ಥೆ (ಟೋಟಲ್ ಸೆಲ್ಯೂಷನ್)ಗೆ ಸೂಚನೆ ನೀಡಿದೆ. ಹೀಗಾಗಿ ರಾಜ್ಯದ ಪ್ರತಿ ನಗರಗಳಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿಕೊಂಡಿದ್ದ 300 ಸಿಬ್ಬಂದಿ ಕಳೆದ ಮೂರು ತಿಂಗಳಿಂದ ಅತಂತ್ರರಾಗಿದ್ದಾರೆ. ಜೊತೆಗೆ ಮನವೊಲಿಕೆ ಮೂಲಕ ಸಾಲ ಮರು ಪಾವತಿ ಮಾಡಿ ಆಸ್ತಿ ಮರು ನೋಂದಣಿಗೆ ಎದುರು ನೋಡುತ್ತಿರುವ ನೂರಾರು ಫಲಾನುಭವಿಗಳು ಈ ಸಿಬ್ಬಂದಿಯನ್ನು ಎಡತಾಕಿತ್ತು ಹಣ ವಾಪಾಸು ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆಯೇ ಈ 300 ಸಿಬ್ಬಂದಿ ಮುಖ್ಯಮಂತ್ರಿಯವರಿಗೂ ಮನವಿ ಸಲ್ಲಿಸಿದ್ದು, ವ್ಯವಸ್ಥೆ ಸರಿಪಡಿಸುವಂತೆ ಕೋರಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
-ಶ್ರೀಕಾಂತ ಭಟ್




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement