ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹವ್ಯಕ ಸಂಘದಿಂದ ನಿಸ್ವಾರ್ಥ ಸೇವೆ

Rashmi Kasaragodu
Updated On : 19 Nov 2013, 11:03 am

ಕ.ಪ್ರ.ವಾರ್ತೆ, ಶಿವಮೊಗ್ಗ ನ. 18 ದೇಶದಲ್ಲಿ ಹವ್ಯಕರು ಅತಿ ಕಡಿಮೆ ಸಂಖ್ಯೆಯಲ್ಲಿದ್ದರೂ ಅವರು ಎಲ್ಲರೊಳಗೊಂದಾಗಿ, ಎಲ್ಲರಿಗೆ ಬೇಕಾದವರಾಗಿ ನಿಸ್ವಾರ್ಥ ಸೇವೆ, ಸಮಾಜೋಪಯೋಗಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಸಾಗರದ ಮಾಜಿ ಶಾಸಕ ಎಲ್. ಟಿ.ತಿಮ್ಮಪ್ಪ ಹೆಗಡೆ ಹೇಳಿದರು.
ಅವರು ಭಾನುವಾರ ಇಲ್ಲಿಯ ಭಗವಾನ್ ಶ್ರೀಧರಸ್ವಾಮಿ ಸಭಾಂಗಣದಲ್ಲಿ ಶಿವಮೊಗ್ಗ ಹವ್ಯಕ ಸಂಘದ ಈ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜಕೀಯ ಪಿತೂರಿ: ಕೆಲಜಾತಿಗಳ ಸಮುದಾಯದಲ್ಲಿ ಹೆಚ್ಚಿನ ಸಂಖ್ಯೆಯ ಜನರಿದ್ದ ಕಾರಣಕ್ಕೋ ಏನೋ ಅಲ್ಲಿ ಇಲ್ಲದ ರಾಜಕೀಯ, ಷಡ್ಯಂತ್ರ, ಪಿತೂರಿಗಳು ನಡೆಯುತ್ತಿರುತ್ತವೆ. ಜಾತಿ ಸಂಘಟನೆಗಳನ್ನು ಕೇವಲ ಜಾತಿಗೋಸ್ಕರವೇ ಸ್ಥಾಪಿಸಿಕೊಂಡಿರುತ್ತಾರೆ. ಆದರೆ ಇಲ್ಲಿನ ಹವ್ಯಕ ಸಂಘ ಅವುಗಳಿಗೆ ಅಪವಾದವಾಗಿದೆ ಎಂದ ಅವರು, ಹವ್ಯಕರು ಸಂಖ್ಯೆಯಲ್ಲಿ ಕಡಿಮೆ ಇದ್ದರೂ, ಇಡೀ ದೇಶವೇ ಗಮನಿಸಬಹುದಾದ ಸಾಧನೆಗಳನ್ನು ಮಾಡಿದವರಿದ್ದಾರೆ, ಮಾಡುತ್ತಿದ್ದಾರೆ ಎಂದರು.
ಹವ್ಯಕರಿಗೆ ಅವರದೇ ಆದ ರಾಜಕೀಯ ಅಸ್ತಿತ್ವ ಇಲ್ಲದಿದ್ದರೂ ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಂಶೋಧನೆಗಳಲ್ಲಿ ಅಪಾರ ಕೆಲಸವ ಮಾಡಿ, ಸಮಾಜೋಪಯೋಗಿ ಕೆಲಸ ಮಾಡುತ್ತಿರುವವರೂ ಇದ್ದಾರೆ. ಅವರು ಎಂದೂ ಪ್ರತ್ಯೇಕ ರಾಜಕೀಯ ಅಸ್ತಿತ್ವ ಕೇಳಿದವರಲ್ಲ ಎಂದರು.
ಎಲ್ಲರೂ ಕೈಜೋಡಿಸಿ: ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಪ್ರತಿಭೆ ಗುರುತಿಸುವ ಕೆಲಸವಾಗಬೇಕು. ಅವೆಲ್ಲವನ್ನೂ ಹವ್ಯಕ ಸಮಾಜ ಮಾಡಿಕೊಂಡು ಬರುತ್ತಿದೆ. ಹವ್ಯಕ ಸಂಘ ನಿರ್ಮಿಸುತ್ತಿರುವ ವಿದ್ಯಾರ್ಥಿನಿ ನಿಲಯ, ಸಭಾಭವನ ಇತ್ಯಾದಿಗಳಿಗೆ ಎಲ್ಲರೂ ಹಣಕಾಸಿನ ನೆರವು ನೀಡಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಶಾರದಾ ಪೂರ್ಯಾನಾಯ್ಕ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿವಮೊಗ್ಗ ಹವ್ಯಕ ಸಂಘದ ಕೆಲಸ ಕಾರ್ಯಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಅದು ಕೈಗೊಳ್ಳುವ ಎಲ್ಲಾ ಸಮಾಜೋಪಯೋಗಿ ಕಾರ್ಯಗಳಿಗೆ ತಮ್ಮ ಶಾಸಕರ ನಿಧಿಯಿಂದ ಸಾಧ್ಯವಾದಷ್ಟು ಅನುದಾನ ನೀಡುತ್ತೇನೆ. ಈ ಸಾಲಿನ ಬಜೆಟ್ನಲ್ಲಿ ಅದಕ್ಕೆ ಅವಕಾಶವಿಲ್ಲ. ಬರುವ ಬಜೆಟ್ನಲ್ಲಿ ಖಂಡಿತವಾಗಿಯೂ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಅಶೋಕ ಜಿ.ಭಟ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement