ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಗರಸಭೆ ಅಧ್ಯಕ್ಷ ಸ್ಥಾನ ತಪ್ಪಿಸಲು ಯತ್ನ: ಆರೋಪ

Mainashree
Updated On : 20 Nov 2013, 11:08 am

ಕನ್ನಡಪ್ರಭ ವಾರ್ತೆ, ಸಾಗರ, ನ.19
ನಗರಸಭೆ ಅಧ್ಯಕ್ಷ ಸ್ಥಾನ ತಪ್ಪಿಸುವ ಸಲುವಾಗಿ ಬಿಜೆಪಿಯು ಪರಿಶಿಷ್ಟ ಜಾತಿಗೆ ಸೇರಿದ ನನ್ನ ಮೇಲೆ ಅನಗತ್ಯವಾಗಿ ಆಶ್ರಯ ನಿವೇಶನ ಹಗರಣ ಆರೋಪ ಹೊರಿಸುತ್ತಿದೆ ಎಂದು ನಗರಸಭೆ ಸದಸ್ಯ ಗಣಾಧೀಶ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಅಧ್ಯಕ್ಷನಾಗುವ ಅವಕಾಶ ನನಗೆ ಇದೆ. ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ವಿರೋಧಿಗಳಾಗಿಯೆ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಾ ಬಂದಿರುವ ಬಿಜೆಪಿ ಆರೋಪ ಮಾಡುತ್ತಿದೆ.
ಆಶ್ರಯ ನಿವೇಶನ ಹಗರಣಕ್ಕೂ- ತಮಗೂ ಯಾವುದೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಬಿಜೆಪಿ ಮುಖಂಡರು ತಕ್ಷಣ ಆರೋಪ ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.
ಇನ್ನೋರ್ವ ಸದಸ್ಯ ಎನ್. ಶ್ರೀನಾಥ್ ಮಾತನಾಡಿ, ನಗರಸಭೆಯಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದ್ದ ವೇಳೆ ಆಶ್ರಯ ನಿವೇಶನಕ್ಕೆ ಸಂಬಂಧಪಟ್ಟಂತೆ ದೊಡ್ಡ ಮಟ್ಟದ ಹಗರಣ ನಡೆದಿದೆ. 300ಕ್ಕೂ ಹೆಚ್ಚು ಆಶ್ರಯ ನಿವೇಶನವನ್ನು ನಿಯಮಾವಳಿಗಳನ್ನು ಗಾಳಿಗೆ ತೂರಿ ಪರಭಾರೆ ಮಾಡಲಾಗಿದೆ. ನಗರಸಭೆಯ ಆಶ್ರಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ರಾಜಕುಮಾರ್ ಎಂಬ ನೌಕರ ಹಾಗೂ ಕೆಲವು ಬಿಜೆಪಿ ಸದಸ್ಯರು ಆಶ್ರಯ ನಿವೇಶನ ಹಗರಣದ ಪ್ರಮುಖ ರೂವಾರಿಗಳಾಗಿದ್ದು, ಅನಗತ್ಯ ಆರೋಪ ಹೊರಿಸಿ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದರು.
ಸದಸ್ಯ ಜಿ.ಕೆ. ಭೈರಪ್ಪ ಮಾತನಾಡಿ, 1990ರಲ್ಲಿಯೆ ಶ್ರೀಧರ ನಗರದಲ್ಲಿ ಬಗರ್‌ಹುಕುಂ ಯೋಜನೆಯಡಿ ಮನೆ ನಿರ್ಮಿಸಿಕೊಂಡಿದ್ದೇವೆ. ಆದರೆ, 1992ರಲ್ಲಿ ನಮಗೆ ಗೊತ್ತಿಲ್ಲದಂತೆ ನಮ್ಮ ಜಾಗ ಸೇರಿಸಿ ಆಶ್ರಯ ನಿವೇಶನ ಲೇಔಟ್ ಮಾಡಲಾಗಿದೆ.
ನಾವು ವಾಸಿಸುತ್ತಿರುವ ಜಾಗಕ್ಕೆ ನಿವೇಶನದ ಸಂಖ್ಯೆ ನಮೂದಿಸಿ ಬೇರೆಯವರಿಗೆ ಮಂಜೂರು ಮಾಡಿಕೊಡಲಾಗಿದೆ. ಇದನ್ನು ರದ್ದುಪಡಿಸುವಂತೆ ಹಿಂದಿನಿಂದಲೂ ಆಡಳಿತ ನಡೆಸುವವರಿಗೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ನಾವು ಅಕ್ರಮವಾಗಿ ಯಾವುದೆ ನಿವೇಶನ ಹೊಂದಿಲ್ಲ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement