ನೂತನ ಜಾಹೀರಾತು ನೀತಿ ವಿರುದ್ಧ ಆಕ್ಷೇಪ
ಕ.ಪ್ರ.ವಾರ್ತೆ ಶಿವಮೊಗ್ಗ ನ.19
ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಜಾಹೀರಾತು ನೀತಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಅತ್ಯಂತ ಮಾರಕವಾಗಿದ್ದು, ಸರ್ಕಾರ ಕೂಡಲೇ ಈ ನೀತಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಪತ್ರಕರ್ತರು ಪ್ರತಿಭಟನೆ ನಡೆಸಿದರು.
ನೂತನ ಜಾಹೀರಾತು ನೀತಿ ತರುವ ಮೂಲಕ ಜಿಲ್ಲಾ ಮಟ್ಟದ ಪತ್ರಿಕೆಯನ್ನು ಮುಗಿಸಿ ಹಾಕುವ ಕುತಂತ್ರವಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘ
ಅಭಿಪ್ರಾಯಪಟ್ಟಿದೆ. ಸಾಮಾಜಿಕ ನ್ಯಾಯದ ಮಾತನಾಡುವ ತಮ್ಮ ಸರ್ಕಾರ ಸಣ್ಣ ಪತ್ರಿಕೆಗಳ ವಿಷಯದಲ್ಲಿ ಮಾರಕವಾಗಿ ವರ್ತಿಸುತ್ತಿದೆ. ಕೂಡಲೇ ಸರ್ಕಾರ ಈ ಹೊಸ ಜಾಹಿರಾತು ನೀತಿಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸುವುದಾಗಿ ಸಂಘ ಆಗ್ರಹಿಸಿದೆ.
ಬೇಡಿಕೆಗಳು: ಸರ್ಕಾರದ ನೂತನ ಜಾಹಿರಾತು ನೀತಿಯನ್ನು ಕೂಡಲೇ ಹಿಂಪಡೆಯಬೇಕು.
- ಹೊಸ ಮಾಧ್ಯಮ ನೀತಿ ಜಾರಿಗೆ ತರಬೇಕು.
- ಸರ್ಕಾರವೇ ನೇಮಿಸಿದ್ದ ಪಿ. ರಾಮಯ್ಯ ಸಮಿತಿ ವರದಿಯನ್ನೊಳಗೊಂಡ ಹೊಸ ಮಾಧ್ಯಮ ನೀತಿ ಜಾರಿಗೆ ತರಬೇಕು.
- ಸರ್ಕಾರ ಹೊಸ ಮಾಧ್ಯಮ ನೀತಿ ರೂಪಿಸುವಾಗ ಪತ್ರಕರ್ತರ ಸಂಘಟನೆಗಳೊಂದಿಗೆ ಚರ್ಚಿಸಿ ನೀತಿ ರೂಪಿಸಬೇಕು.
ಆಗ್ರಹ: ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯನವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಅರ್ಪಿಸಿದ ಪತ್ರಕರ್ತರು, ಕೂಡಲೇ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶೃಂಗೇಶ್, ರಾಜ್ಯ ಸಂಘದ ಕಾರ್ಯದರ್ಶಿ ಎನ್. ಮಂಜುನಾಥ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕೆ. ಸೂರ್ಯನಾರಾಯಣ, ಭಂಡಿಗಡಿ ನಂಜುಂಡಪ್ಪ, ಪದ್ಮನಾಭ, ಎನ್. ರವಿಕುಮಾರ್, ಎಸ್ಕೆ ಗಜೇಂದ್ರ ಸ್ವಾಮಿ, ರಂಜಿತ್ ರಂಗಸ್ವಾಮಿ, ನಾಗರಾಜ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.