ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನೆಪ ಹೇಳಿ ಸುತ್ತಾಡುವ ಶಿಕ್ಷಕರಿಗೆ ಬ್ರೇಕ್

Mainashree
Updated On : 20 Nov 2013, 11:06 am

ಕ.ಪ್ರ.ವಾರ್ತೆ  ಶಿವಮೊಗ್ಗ    ನ.19
ಇನ್ನುಮುಂದೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಕೆಲಸವಿಲ್ಲದೇ ಡಿಡಿಪಿಐ ಕಚೇರಿ, ಬಿಇಒ ಕಚೇರಿಯಲ್ಲಿ ಕೆಲಸವಿದೆ ಎಂದು ನೆಪ ಹೇಳಿ ಸುತ್ತಾಡುವುದಕ್ಕೆ ಬ್ರೇಕ್ ಬೀಳಲಿದೆ. ಈ ರೀತಿ ಕೆಲಸವಿದ್ದರೆ ಲಿಖಿತ ಆದೇಶವಿರಬೇಕು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಹಾಗೂ ಸಿಇಒ ಸಸಿಕಾಂತ್ ಸೆಂಥಿಲ್ ಈ ಸೂಚನೆ ನೀಡಿ, ಲಿಖಿತ ಆದೇಶವಿಲ್ಲದೆ ಶಿಕ್ಷಕರು ಶಾಲೆಗಳಿಗೆ ಗೈರು ಹಾಜರಾಗಿ ಯಾವುದೇ ಸಭೆಗಳಲ್ಲಿ ಭಾಗವಹಿಸಬಾರದು. ಈ ಸಂಬಂಧ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರಿಗೆ ಸ್ಪಷ್ಟ ಆದೇಶ ನೀಡಬೇಕು ಎಂದು ಸೂಚಿಸಿದ್ದಾರೆ.
ಚರ್ಚೆ ಪ್ರಾರಂಭ: ಉಪಾಧ್ಯಕ್ಷೆ ಹೇಮಾ ಪಾವನಿ, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ದಾನೇರ ಅವರು ಶಿಕ್ಷಣ ಇಲಾಖೆ ಕುರಿತ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ, ಶಿಕ್ಷಕರು ಬಿಇಒ, ಡಿಡಿಪಿಐ ಕಚೇರಿಗಳಿಗೆ ವಿನಾಕಾರಣ ಅಲೆದಾಡುತ್ತಿದ್ದಾರೆ ಎಂದಾಗ ಈ ವಿಷಯ ಚರ್ಚೆಗೆ ಬಂತು.
ಶಾಲಾ ಅವಧಿಯಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಮೇಲಧಿಕಾರಿಗಳು ಸಭೆ ಕರೆದಿದ್ದಾರೆಂದು ಶಾಲೆಗೆ ಗೈರು ಹಾಜರಾಗುವುದರಿಂದ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಬಂಧಿಸಿದ ಶಿಕ್ಷಕರು ಇರುವುದಿಲ್ಲ. ಬಿಸಿಯೂಟದವರು ಜನಪ್ರತಿನಿಧಿಗಳಿಗೆ ಉತ್ತರ ಕೊಡುವಂತಾಗಿದೆ ಎಂದು ಅವರು ಆಕ್ಷೇಪಿಸಿದ್ದರು.
ಇದೇ ಸಂದರ್ಭದಲ್ಲಿ ಸಿಇಒ ಸಸಿಕಾಂತ್ ಸೆಂಥಿಲ್ ಅವರು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 10ನೇ ತರಗತಿ ಫಲಿತಾಂಶ ಕಳೆದ ವರ್ಷಕ್ಕಿಂತ ಉತ್ತಮವಾಗದಿದ್ದರೆ ಡಿಡಿಪಿಐ ಅವರೇ ಪೂರ್ಣ ಜವಾಬ್ದಾರರು ಎಂದರು.
ಯಶಸ್ವಿನಿ ಆಸ್ಪತ್ರೆ ಇಲ್ಲ: ತೀರ್ಥಹಳ್ಳಿ ತಾಲೂಕಿನಲ್ಲಿ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆ ಇಲ್ಲ ಎಂಬುದನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ಸಭೆಯ ಗಮನಕ್ಕೆ ತಂದರು.
ಆಗ ಸಹಕಾರ ಇಲಾಖೆ ಅಧಿಕಾರಿಗಳು, ಜಿಲ್ಲೆಯಲ್ಲಿ ಒಟ್ಟು 17 ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಿವೆ. ಈ ಹಿಂದೆ ತೀರ್ಥಹಳ್ಳಿಯಲ್ಲಿ ಒಂದು ಆಸ್ಪತ್ರೆ ಇತ್ತು. ಆದರೆ ಹಣ ದುರುಪಯೋಗವಾದ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಯಿತು ಎಂದು ಮಾಹಿತಿ ನೀಡಿದರು.
ಯಾವುದಾದರೂ ಆಸ್ಪತ್ರೆಯವರು ಯಶಸ್ವಿನಿ ನೆಟ್‌ವರ್ಕ್‌ಗೆ ಸೇರುತ್ತೇವೆಂದು ಕೇಳಿದರೆ ಸೇರಿಸಬಹುದು. ನಾವೇ ಸೇರಿಸಲು ಬರುವುದಿಲ್ಲ ಎಂದರು.
ಆಗ ಸಿಇಒ, ಒಂದು ಒಳ್ಳೆಯ ಆಸ್ಪತ್ರೆಯನ್ನು ಗುರುತು ಮಾಡಿ ಅವರಿಗೆ ಪ್ರೇರೇಪಿಸಿ ಎಂದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಿ.ಎಸ್. ಯಲ್ಲಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯತ್ರಿ ಷಣ್ಮುಖಪ್ಪ ಉಪಸ್ಥಿತರಿದ್ದರು.
ಇತರೆ ವಿಷಯಗಳು...
- ಶಿಥಿಲಾವಸ್ಥೆಯಲ್ಲಿರುವ ಜಿಲ್ಲೆಯ ಶಾಲಾ ಕಟ್ಟಡಗಳನ್ನು ತಾಂತ್ರಿಕ ಮೌಲ್ಯಮಾಪನ ಮಾಡಿ ತೆರವುಗೊಳಿಸಬೇಕು. ದಾನಿಗಳು ನಿರ್ಮಿಸುವ ಶಾಲೆಗಳು ಸರ್ಕಾರದ ಶಾಲಾ ಕಟ್ಟಡ ಮಾದರಿಯಲ್ಲೇ ನಿರ್ಮಿಸಿಕೊಡಬೇಕು ಎಂದು ಸೂಚನೆ.
- ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಏಜೆನ್ಸಿ ಮೂಲಕ ಹೊರ ಗುತ್ತಿಗೆ ಸೇವೆಯಲ್ಲಿರುವ ಸಿಬ್ಬಂದಿಗೆ ಏಜೆನ್ಸಿಯಿಂದ ವೇತನ ಬಡವಾಡೆಯಾಗುತ್ತಿದೆಯೇ ಎಂಬ ಬಗ್ಗೆ ನಿಗಾ ವಹಿಸುವ ಜವಾಬ್ದಾರಿ ಜಿಲ್ಲಾ ಇಲಾಖಾಧಿಕಾರಿಗಳದೇ ಆಗಿದ್ದು, ಏಜೆನ್ಸಿಯವರಿಗೆ ಸ್ಪಷ್ಟ ಸೂಚನೆ ನೀಡುವಂತೆ ಕ್ರಮ ಕೈಗೊಳ್ಳಲು ಸೂಚನೆ.
-ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆಯಾಗುವ ಪಡಿತರ ಹಾಗೂ ದರಗಳ ವಿವರವನ್ನು ಆಯಾ ನ್ಯಾಯಬೆಲೆ ಅಂಗಡಿಗಳ ಗೋಡೆಗಳ ಮೇಲೆ ಬರೆಸುವಂತೆ ಹಾಗೂ ಪ್ರತಿ ತಿಂಗಳು ಬಿಡುಗಡೆಯಾದ ಪಡಿತರ ವಿವರವನ್ನು ಜನಪ್ರತಿನಿಧಿಗಳಿಗೆ ನೀಡುವಂತೆ ಆದೇಶ.
- ಜಿಲ್ಲೆಯಲ್ಲಿ 681 ರಾಸುಗಳಿಗೆ ಕಾಲುಬಾಯಿ ಜ್ವರ ಬಂದಿದ್ದು, 34 ರಾಸುಗಳು ಸಾವು ಕಂಡಿವೆ. 25 ಪ್ರಕರಣದಲ್ಲಿ ಪರಿಹಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪಶುವೈದ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ.
- ಜಿಲ್ಲೆಯಲ್ಲಿ 28 ಕುಷ್ಟರೋಗ, 5 ಮಲೇರಿಯಾ ರೋಗ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆಯಿಂದ ವಿವರಣೆ.
ಸಭೆಯಲ್ಲಿ ಪ್ರತಿಧ್ವನಿಸಿದ  'ಕನ್ನಡಪ್ರಭ'
ವಿವಿಧ ಇಲಾಖೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೌಶಲ್ಯ ಕಂಪ್ಯೂಟರ್ ತರಬೇತಿ ಯೋಜನೆಯನ್ನು ಕಾನೂನು ಉಲ್ಲಂಘನೆಯಾಗಿರುವ ಬಗ್ಗೆ ಪ್ರಸ್ತಾವ ಬಂತು. ಸಿಇಒ ಸಸಿಕಾಂತ್ ಸೆಂಥಿಲ್ ಅವರು, ಇಸಿಐಎಲ್ ಮೂಲಕ ನಡೆಯುತ್ತಿರುವ ತರಬೇತಿ ಕಳಪೆಯಾಗಿದೆ.
ಕಾನೂನು ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ  ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ವಿವರಣೆ ಕೇಳಿ ಪತ್ರ ಬರೆಯಲಾಗದೆ. ಇನ್ನೊಂದು ವಾರದಲ್ಲಿ ಈ ಬಗ್ಗೆ ವಿವರಣೆ ನೀಡಿ ಎಂದು ತಾಕೀತು ಮಾಡಿದರು.
'ಕನ್ನಡಪ್ರಭ' ಪತ್ರಿಕೆಯು ಇಸಿಐಎಲ್ ಸಂಸ್ಥೆಯು ಪಾರದರ್ಶಕ ಕಾಯ್ದೆ ಉಲ್ಲಂಘಿಸಿರುವ ಬಗ್ಗೆ ವರದಿ ಮಾಡಿ ಗಮನ ಸೆಳೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement