ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬತ್ತ, ರಾಗಿ ಖರೀದಿ ಕೇಂದ್ರಕ್ಕೆ ಆಗ್ರಹ

Mainashree
Updated On : 20 Nov 2013, 11:09 am

ಕ.ಪ್ರ.ವಾರ್ತೆ, ಶಿವಮೊಗ್ಗ, ನ.19 ಬತ್ತ, ರಾಗಿ, ಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ನಗರದ ಸೈನ್ಸ್ ಮೈದಾನದಿಂದ ಹೊರಟ ಸಂಘದ ಸದಸ್ಯರು ಹಾಗೂ ರೈತರು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಈಗಾಗಲೇ ಬತ್ತ, ಮೆಕ್ಕೆಜೋಳ, ರಾಗಿಯನ್ನು ರೈತರು ಕಟಾವು ಮಾಡಿದ್ದಾರೆ. ಆದರೆ, ಸರ್ಕಾರ ಇದುವರೆಗೂ ಯಾವುದೇ ಬೆಳೆಗೆ ಬೆಲೆ ನಿಗದಿ ಮಾಡಿ ಖರೀದಿಗೆ ಮುಂದಾಗಿಲ್ಲ.
ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇದರಿಂದ  ವ್ಯಾಪಾರಿಗಳು ಕೇಳಿದಷ್ಟು ಬೆಲೆಗೆ ರೈತರು ಮಾರಾಟ ಮಾಡುವಂತಾಗಿದೆ. ಆದರಿಂದ ಸರ್ಕಾರ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ಜ್ಯೋತಿ ಬತ್ತ ಖರೀದಿಗೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಮೌಲ್ಯ ಕುಸಿತ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಹಾಗೂ ಕೇಂದ್ರ ಸರ್ಕಾರದ ಕೃಷಿ ಉತ್ಪನ್ನಗಳಿಗೆ ಕಡಿಮೆ ಆಮದು ಸುಂಕ ವಿಧಿಸಿರುವುದರಿಂದ ಸುಗ್ಗಿ ಬರುವುದಕ್ಕಿಂತ ್ಛಮೊದಲೇ ರೈತರು ಬೆಳೆದ ಬೆಳೆಗಳ ಮೌಲ್ಯ ಕುಸಿದಿವೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ ರೈತರ ಬೆಳೆಗೆ ಖರ್ಚು ಮಾಡಿದ ಹಣಕ್ಕಿಂತ ಕಡಿಮೆ ಇದೆ ಎಂದು ಧರಣಿ ನಿರತರು ದೂರಿದರು.
ಈ ಕೂಡಲೇ ಸರ್ಕಾರ ಬತ್ತ, ಮೆಕ್ಕೆಜೋಳ, ರಾಗಿ ಕ್ವಿಂಟಲ್‌ಗೆ ರು. 2,500 ದರದಲ್ಲಿ ರೈತರಿಂದ ನೇರವಾಗಿ ಖರೀದಿಸಬೇಕು. ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡುವುದರೊಂದಿಗೆ ಸಾಲ ವಸೂಲಾತಿ ನಿಲ್ಲಿಸಬೇಕು. ಗೋರಕ್ ಸಿಂಗ್ ವರದಿಯಂತೆ ಎಲ್ಲಾ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಬತ್ತ ಹಲ್ಲಿಂಗ್ ಮಾಡುವ ರೈಸ್ ಮಿಲ್‌ಗಳಿಗೆ ಯಾವುದೇ ಕಾರಣಕ್ಕೂ ಲೆವಿ ನಿಗದಿ ಮಾಡಬಾರದು.
ಬೆಳೆಗಳಿಗೆ ಪರಿಹಾರ: ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡಬೇಕು. ಬಗರ್ ಹುಕುಂ ಸಾಗುವಳಿದಾರರ ಜಮೀನುಗಳಿಗೆ ಹಕ್ಕುಪತ್ರ ನೀಡಬೇಕು.
ತುಂಗಾ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ರೈತನಿಂದ ಅಡಕೆ ಪಡೆದು ಹಣ ನೀಡದೆ ವಂಚಿಸಿದ ಶಿವಮೊಗ್ಗದ ಮಂಜುನಾಥೇಶ್ವರ ಅಡಕೆ ಮಂಡಿ ಮಾಲೀಕನನ್ನು ಕೂಡಲೇ ಬಂಧಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ರಾಜ್ಯರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ರೈತ ಮುಖಂಡ ಕಡಿದಾಳು ಶಾಮಣ್ಣ, ಸಂಘದ ಕಾರ್ಯದರ್ಶಿ ಹಿಟ್ಟೂರು ರಾಜು, ರಾಘವೇಂದ್ರ, ಜಿಲ್ಲಾಧ್ಯಕ್ಷ ಟಿ.ಎಂ. ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ, ತಾಲೂಕು ಅಧ್ಯಕ್ಷ ಜಗದೀಶ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement