ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಂಸದರ ಚಾಲನೆ
ಶಿರಾಳಕೊಪ್ಪ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಒಂದಲ್ಲ ಒಂದು ಅಭಿವೃದ್ಧಿ ಕೆಲಸ ಮಾಡಿದ್ದು, ಇನ್ನೂ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಶಿಕಾರಿಪುರ ತಾಲೂಕಿನ ಹಿರೇಜಂಬೂರ ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರಾಜೀವ್ ಗಾಂಧಿ ಸೇವಾ ಕೇಂದ್ರ, ಸಂಸದರ ಪ್ರದೇಶಾಭಿವೃದ್ಧಿಯಲ್ಲಿ 3 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಬಸ್ ನಿಲ್ದಾಣ ಉದ್ಘಾಟಿಸಿ ನಂತರ 25 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕಿನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಕುಸ್ಕೂರ, ಹಿರೇಜಂಬೂರ, ಮಲ್ಲೇನಹಳ್ಳಿ ಮಾರ್ಗವಾಗಿ 40 ಕಿಮೀ ಜೋಡಿ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಅದಕ್ಕಾಗಿ 40 ಕೋಟಿ ವೆಚ್ಚ ಮಾಡಿದೆ ಎಂದರು.
ತಾಲೂಕಿನ ಕೊನೆ ಗ್ರಾಮ ಕಡೇನಂದಿಹಳ್ಳಿಯಲ್ಲಿ 20 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟಿಸಿ ಕುಸ್ಕೂರ ಗ್ರಾಮ ಸೇರಿದಂತೆ ಇತರ ಗ್ರಾಮಗಳಲ್ಲಿ ಸಂಸದರ ಅನುದಾನದಲ್ಲಿ ನಿರ್ಮಿಸಿದ ಬಸ್ ನಿಲ್ದಾಣ ಉದ್ಘಾಟಿಸಿದರು.
ಸಂಸದರೊಂದಿಗೆ ಜಿಪಂ ಸದಸ್ಯ ಬಂಗಾರ ನಾಯ್ಕ್, ಮಲ್ಲೇನಹಳ್ಳಿ ಈಶ್ವರಪ್ಪ, ಎಪಿಎಂಸಿ ನಿರ್ದೇಶಕ ಕೋಡಿಕೊಪ್ಪ ಮಂಜುನಾಥ, ಹಾಲು ಉತ್ಪಾದಕ ಸಂಘದ ನಿರ್ದೇಶಕ ಶಿವಶಂಕರಪ್ಪ, ಗ್ರಾಪಂ ಅಧ್ಯಕ್ಷೆ ಉಮ್ಮಿಬಾಯಿ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಕೆಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದರಾಮಪ್ಪ ಇತರರು ಹಾಜರಿದ್ದರು.