ಕರಾಮುವಿವಿಯಿಂದ ಕನ್ನಡದ ಕಗ್ಗೊಲೆ!
ಶಿವಮೊಗ್ಗ: ಪ್ರರಾಸಗೊಳ್ಳುವ, ಸಂಸಎಯನ್ನು, ಅಬರಂ, ಮರಮ, ಪೃರಚರ, ಲ್ಲಿಗೆ, ಮುಖ್ಯಶ್ಥ, ಮೂದರಿಸಿದರು, ಶಾಯಿಸ್ಥಾಪನೆ... ಈ ರೀತಿಯ ಪದಗಳನ್ನು ಓದಲು ಸಾಧ್ಯವೇ...
ಆದರೆ, ಓದಲೇಬೇಕಾದ ಅನಿವಾರ್ಯತೆ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ತನ್ನಲ್ಲಿ ಪರೀಕ್ಷೆ ತೆಗೆದುಕೊಂಡ ಎಂಎ (ಇತಿಹಾಸ) ವಿದ್ಯಾರ್ಥಿಗಳದ್ದು.
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಎಂಎ ವಿದ್ಯಾರ್ಥಿಗಳಿಗೆ ನೀಡಿರುವ ಕೋರ್ಸ್ ಮೆಟೀರಿಯಲ್ನಲ್ಲಿ ಮಹಾ ಪ್ರಮಾದ ಕಂಡುಬಂದಿದ್ದು, ಕನ್ನಡದ ಮಾನ ಮೂರಾಬಟ್ಟೆಯಾಗಿದೆ. ಹಾಗೆಯೇ ಕಾಣದ ಕೇಳದ ಅನೇಕ ಪದಗಳನ್ನು ಪಠ್ಯಪುಸ್ತಕ ರಚಿಸಿದ ಘನ ವಿದ್ವಾಂಸರು ಎಲ್ಲಿಂದ ಹೆಕ್ಕಿ ತೆಗೆದರು ಎಂಬ ವ್ಯಂಗ್ಯಯುಕ್ತ ಪ್ರಶ್ನೆ ಕೇಳಿ ಬಂದಿದೆ.
ಮುಕ್ತ ವಿಶ್ವವಿದ್ಯಾಲಯಕ್ಕೆ ಇಷ್ಟೊಂದು ಬರ ಬಾರದಿತ್ತೇನೋ, ಸುಮಾರು 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೀಡಿರುವ ಅಧ್ಯಯನ ಸಾಮಗ್ರಿಗಳಲ್ಲಿ ಬಗೆಬಗೆಯ ತಪ್ಪುಗಳು. ಹಕಾರ, ಅಕಾರಕ್ಕೂ ವ್ಯತ್ಯಾಸ ಗೊತ್ತಾಗದಂತೆ ನೂರಾರು ತಪ್ಪುಗಳು ಕಂಡುಬಂದಿವೆ.
ಏನೆಲ್ಲಾ ತಪ್ಪುಗಳಿವೆ?: ಈ ತಪ್ಪುಗಳಿಗೆ ಒಂದು ಉದಾಹರಣೆ, ಇತಿಹಾಸ ಭಾಗದ (ಬ್ಲಾಕ್- 7) ಅಮೆರಿಕ ಸಂಯುಕ್ತ ಸಂಸ್ಥಾನಗಳ ಇತಿಹಾಸ (1765-1990)ಪಠ್ಯ ಸಾಮಗ್ರಿಯ ಪ್ರತಿ ಪುಟದಲ್ಲೂ ತಪ್ಪುಗಳು ಕಾಣಿಸಿಕೊಂಡಿವೆ. ಈ ಸಾಮಗ್ರಿಯ ಪುಟ 30ರಲ್ಲಿರುವ ಜಿಮ್ಮಿ ಕಾರ್ಟರ್ನ ಆಂತರಿಕ ನೀತಿ ಪಠ್ಯದಲ್ಲಂತೂ ತಪ್ಪು ಯಾವುದು ಸರಿ ಯಾವುದು ಎಂಬ ಗೊಂದಲ ಏರ್ಪಡುತ್ತದೆ. ಮೇಲೆ ಮೆಲೆ ಎಂದಾಗಿದೆ. ಅಮೇರಿಕಾ ಅಮೆರಿಕವಾಗಿದ್ದರೆ, ನಡವಳಿಕೆ ನೆಡವಳಿಕೆಯಾಗಿದೆ. ಸಂಸ್ಥೆ ಪದದ ಪದಲು ಸಂಸಎಯನ್ನು ಎಂದಾಗಿದೆ. ಹೊಸ ಹೋಸ ಎಂದಾಗಿದ್ದರೆ, ಕಾರ್ಟರ್ ಹೆಸರೂ ತಪ್ಪಾಗಿದೆ. ಕಾರ್ಟರಂ ಎಂದು ಬದಲಾಗಿದೆ. ಪ್ರಸಾರ ಎಂಬ ಬದಲು ಪ್ರರಾಸ ಎಂದಾಗಿದೆ. ಬಿಯರ್ ಪದದ ಬಳಕೆಯೂ ತಪ್ಪಾಗಿದೆ. ಬಿಯರಂ ಎಂದು ಮುದ್ರಣಗೊಂಡಿದೆ. ಅಸಂಬದ್ಧ ಪದವನ್ನೂ ಅಸಂಬದ್ಧವಾಗಿಯೇ ಬಳಸಲಾಗಿದೆ.
ಇನ್ನೊಂದಿಷ್ಟು ಉದಾಹರಣೆ ಎಂದರೆ, ಹೆಣದುಬ್ಬರ(ಹಣದುಬ್ಬರ), ಜಿಪ್ರಿಯ (ಜನಪ್ರಿಯ), ಆಯವ್ಯೆಯ(ಆಯವ್ಯಯ), ಡೆಮಾಕ್ರೀಟಿಕ್ (ಡೆಮಾಕ್ರಟಿಕ್), ಕೊಲ್ಳುವುದನ್ನು (ಕೊಳ್ಳುವುದನ್ನು), ಮರಮ (ಮರಣ), ಈಡಿಪ್ಟ್(ಈಜಿಪ್ಟ್), ವಾಪಸಂ (ವಾಪಸ್), ಮಸ್ಕೋ(ಮಾಸ್ಕೋ), ಗಳಸ್ಯೆ ಕಂಠಸ್ಯೆ(ಗಳಸ್ಯ ಕಂಠಸ್ಯ), ಒದು (ಒಂದು), ಕರ್ಚು(ಖರ್ಚು), ರಕ್ಷಣಾಪಡಿಗಳು (ರಕ್ಷಣಾ ಪಡೆಗಳು), ಗೋರ್ಬಚವು(ಗೋರ್ಬಚೆವ್), ಸ್ಥಿಪಿಸಿತು(ಸ್ಥಾಪಿಸಿತು), ಹಮದ (ಹಣದ), ಹೋಸ ಮಿದ್ಯುತ್ (ಹೊಸ ವಿದ್ಯುತ್), ಕಾರ್ಟರ್ (ಕಾರ್ಟರ್ನಿ), ತೆಳ್ಳಿ (ತಳ್ಳಿ), ಹೊಲಸೆ (ವಲಸೆ), ಎರಿಸಿ (ಏರಿಸಿ) ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಸವಿಗಳು ಕೂಡ ತಪ್ಪಾಗಿವೆ. 1977ರಲ್ಲಿ ಕಾಂಗ್ರೆಸ್ ಹೊಸ ವಿದ್ಯುತ್ ಮಂಡಳಿ ಸ್ಥಾಪಿಸಿ ಎಂದು ಒಂದು ವಾಕ್ಯ ಬರಬೇಕು. ಆದರೆ ಅಲ್ಲಿ, 977ರಲ್ಲಿ ಹೋಸ ಮಿದ್ಯುತ್ ಮಂಡಳಿ ಸ್ಥಾಪಿಸಿತು ಎಂದು ಪ್ರಕಟಗೊಂಡಿದೆ.
ಬೌದ್ಧಿಕ ದಿವಾಳಿತನ: ವಿಶ್ವವಿದ್ಯಾಲಯವೊಂದರ ಅಧ್ಯಯನ ಸಾಮಗ್ರಿ ಇಷ್ಟು ಕೆಳಮಟ್ಟದಲ್ಲಿದೆ ಎಂದರೆ ಅದು ವಿಶ್ವವಿದ್ಯಾಲಯ ಬೌದ್ಧಿಕ ಮಟ್ಟವನ್ನೇ ಪ್ರಶ್ನಿಸುವಂತಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ವಿಶ್ವವಿದ್ಯಾಲಯಕ್ಕೆ ಭಾಷಾ ವಿದ್ವಾಂಸರ, ಪ್ರೊಫೆಸರ್, ಸಹಾಯಕ ಪ್ರೊಫೆಸರ್ಗಳ ಕೊರತೆ ಇದೆಯೇ ಎಂಬ ಪ್ರಶ್ನೆಯೂ ಏಳುತ್ತದೆ. ಯುಜಿಸಿ ವೇತನ ಶ್ರೇಣಿಯಲ್ಲಿ ವೇತನ ಪಡೆಯುವ ಬೋಧಕ ವರ್ಗ ಮಾಡುತ್ತಿರುವುದಾದರೂ ಏನು ಎಂಬುದನ್ನು ವಿಶ್ವವಿದ್ಯಾಲಯದ ಮುಖ್ಯಸ್ಥರೇ ಸ್ಪಷ್ಟಪಡಿಸಬೇಕು.
ವಿಶ್ವವಿದ್ಯಾಲಯದ ಸಂಬಂಧಪಟ್ಟ ವಿಭಾಗದ ಅಧ್ಯಾಪಕರನ್ನು ವಿಚಾರಿಸಿದರೆ, ಇದು ವಿಭಾಗದ ಆಂತರಿಕ ಗೊಂದಲದಿಂದಾಗಿ ಏರ್ಪಟ್ಟ ತಪ್ಪು. ಯಾರು ಹೊಣೆ ಹೊರಲು ಸಿದ್ಧರಿಲ್ಲ ಎಂದು ವಿವರಿಸಿದರು.
ವಿದ್ಯಾರ್ಥಿಗಳ ಕಥೆ ಏನು?
ಮುಕ್ತ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆಯುವ ಕನಸು ಹೊತ್ತು ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳು ಇಂತಹ ಕಳಪೆ ಸಾಹಿತ್ಯ ಇರುವ ಅಧ್ಯಯನ ಸಾಮಗ್ರಿ ಓದಿದರೆ ಪರೀಕ್ಷೆಯಲ್ಲಿ ಏನು ಉತ್ತರ ಬರೆಯಲು ಸಾಧ್ಯವಿದೆ, ಇಸವಿಗಳೇ ತಪ್ಪು, ಅಮೇರಿಕಾದ 39ನೇ ಅಧ್ಯಕ್ಷರ ಹೆಸರೇ ತಪ್ಪು ತಪ್ಪಾಗಿ ಪ್ರಕಟಗೊಂಡಿದೆ ಎಂದರೆ ವಿದ್ಯಾರ್ಥಿ ಹೇಗೆ ಮನನ ಮಾಡಿಕೊಳ್ಳಲು ಸಾಧ್ಯ. ಏಲ್ಲೂ ಕೇಳದ, ಕಾಣದ ಶಬ್ದಗಳು ವಿದ್ಯಾರ್ಥಿಗಳನ್ನು ತಬ್ಬಿಬ್ಬು ಮಾಡುವುದರಲ್ಲಿ ಅನುಮಾನವೇ ಇಲ್ಲ.
ತರಾತುರಿಯಾಗಿ ಸಿದ್ಧಪಡಿಸುವ ಸಾಹಿತ್ಯ ಇದಲ್ಲ. ಅಧ್ಯಯನ ಸಾಮಗ್ರಿ ಸಿದ್ಧಪಡಿಸಲು ತಿಂಗಳಾನುಗಟ್ಟಲೆ ಸಮಯವಿರುತ್ತದೆ. ಅದನ್ನು ಸಿದ್ಧಪಡಿಸಲು ತಜ್ಞರ ತಂಡವೇ ಇರುತ್ತದೆ. ತಪ್ಪು ಸರಿ ನೋಡಲು ಭಾಷಾ ವಿದ್ವಾಂಸರಿರುತ್ತಾರೆ. ಹಾಗಿದ್ದ ಮೇಲೆ ಸರಣಿ ತಪ್ಪುಗಳು ಹೇಗೆ ಸಂಭವಿಸಿತು ಎಂಬ ಪ್ರಶ್ನೆಗೆ ವಿವಿಯಿಂದ ಉತ್ತರವಿಲ್ಲ.
-ಶ್ರೀಕಾಂತ ಭಟ್