ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಫೋಟೋಗೆ ನೀಡುವ ಮಹತ್ವ ವ್ಯಕ್ತಿಗೆ ನೀಡುತ್ತಿಲ್ಲ

Lingaraj Badiger
Updated On : 21 Nov 2013, 10:41 am

ಕ.ಪ್ರ.ವಾರ್ತೆ ಶಿವಮೊಗ್ಗ   ನ.20
ಗಾಂಧೀಜಿ, ಕನಕ ದಾಸರು ಇಂದು ನಮ್ಮೊಂದಿಗಿಲ್ಲದಿರಬಹುದು. ಆದರೆ, ಅವರು ತಮ್ಮ ಸಿದ್ಧಾಂತದ ಮೂಲಕ ನಮ್ಮನ್ನಾಳುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪ್ರತಿಪಾದಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯಲ್ಲಿ ಮಾತನಾಡಿದ ಅವರು, ಇಂದು ಫೋಟೋಗೆ ಕೊಡುವ ಮಹತ್ವ ಫೋಟೋ ಹಿಂದಿನ ಮನುಷ್ಯನ ತತ್ವಕ್ಕೆ ಕೊಡುತ್ತಿಲ್ಲ. ಇದೇ ಬಹು ದೊಡ್ಡ ಸಮಸ್ಯೆಯಾಗಿದೆ. ಜಯಂತಿಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಮಹಾನ್ ವ್ಯಕ್ತಿಗಳ ತತ್ವ, ಸಿದ್ಧಾಂತಗಳನ್ನು ಅರಿಯುವ ಕೆಲಸವಾಗಬೇಕೆಂದರು.
ಜನಸಾಮಾನ್ಯರಿಗೆ ತಲುಪಲಿ: ಕನಕ ದಾಸರ ಸಾಹಿತ್ಯ, ದೇಶಕ್ಕೆ ಪ್ರಪಂಚಕ್ಕೆ ಬಿಟ್ಟುಹೋದ ಪರಂಪರೆಗೆ ಆದ್ಯತೆ ಕೊಡುವುದು ಅಗತ್ಯವಿದೆ ಎಂದ ಅವರು, ನಾವು ಫೋಟೋಗಳಿಗೆ ಪುಷ್ಪಾರ್ಚನೆ ಮಾಡುತ್ತೇವೆ, ಊದುಬತ್ತಿ- ದೀಪ ಹಚ್ಚುತ್ತೇವೆ. ಆದರೆ, ಅವರ ವಿಚಾರಗಳನ್ನೇ ಮರೆಯುತ್ತೇವೆ. ಈ ಕಾರ್ಯಕ್ರಮ ರೂಪಿಸಿರುವುದೇ ಅವರ ವಿಚಾರ ಜನ ಮಾನಸಕ್ಕೆ ಹೋಗಬೇಕು, ಚರ್ಚೆಯಾಗಬೇಕು, ಜನರಿಗೆ ತಲುಪಬೇಕು ಎಂದು. ಅದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದರು.
ಒಮ್ಮೆ ಎಸ್ಸಿ, ಎಸ್ಟಿ ಹಾಸ್ಟೆಲ್ ಒಂದಕ್ಕೆ ಹೋಗಿದ್ದೆ, ಅಲ್ಲಿನ ವಿದ್ಯಾರ್ಥಿಗಳು ನಾಲ್ಕು ಗೋಡೆಗೂ ಅಂಬೇಡ್ಕರ್ ಫೋಟೋ ಹಾಕಿ ಪೂಜೆ ಮಾಡಿದ್ದರು. ಊದು ಬತ್ತಿ ಹಚ್ಚಿ ಫೋಟೋ ಕೂಡ ಸುಟ್ಟು ಹೋಗಿತ್ತು. ಆದರೆ, ಅಂಬೇಡ್ಕರ್ ಹುಟ್ಟಿದ್ದು ಯಾವಾಗ ಎಲ್ಲಿ ಅಂದರೆ ಆಂಧ್ರ, ಮದ್ರಾಸ್ ಎಂದೆಲ್ಲಾ ಉತ್ತರಿಸಿದರು. ಪರಿಸ್ಥಿತಿ ಹೀಗಾಗಬಾರದು. ಫೋಟೋಗಿಂತ ಫೋಟೋದಲ್ಲಿರುವ ವ್ಯಕ್ತಿಯ ಕುರಿತು ಅರಿವು ಇರಬೇಕು. ಅವರ ತತ್ವ ಸಿದ್ಧಾಂತಗಳನ್ನು ಅಧ್ಯಯನ ಮಾಡಬೇಕೆಂದು ತಿಳಿಸಿದರು.
ರಾಜಕಾರಣಿಗಳು, ಮಾಧ್ಯಮದವರು ಹುಟ್ಟಿರುವುದೇ ವಿವೇಕ ಹೇಳಲು ಎಂದುಕೊಂಡಿದ್ದೇವೆ. ಹಾಗೆಯೇ ನಾವು ಹೇಳುವ ವಿವೇಕ ವಿಶ್ವಕ್ಕೆ, ನಮಗಲ್ಲ ಎಂಬ ಭ್ರಮೆಯಲ್ಲಿದ್ದೇವೆ. ನಾವು ಮೊದಲು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಬದಲಾವಣೆಯಾಗಲಿ: ಸಮಾಜದ ಬದಲಾವಣೆಗೆ 5-10 ಕೋಟಿ ಜನರಲ್ಲಿ ಬದಲಾವಣೆ ಬೇಡ. ಒಬ್ಬನೇ ಸಾಕು. ತ್ಯಾಗಮಯಿ, ಬುದ್ಧಿವಂತ, ಕಲ್ಮಶ ಇಲ್ಲದವನನ್ನು ತಯಾರು ಮಾಡಿದರೆ, ಆತ ಉಳಿದವನ್ನು ಸಂಬಾಳಿಸುತ್ತಾನೆ. ಗಾಂಧಿ ಬುದ್ಧ ಇದಕ್ಕೆ ಉದಾಹರಣೆ. ಇಂತಹ ಚಿಂತಕರನ್ನು ತಯಾರು ಮಾಡಲು ವೇದಿಕೆ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಸಣ್ಣರಾಮ ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್, ಸಿದ್ದರಾಮಣ್ಣ ಹಾಜರಿದ್ದರು. ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಉಪಾಧ್ಯಕ್ಷೆ ಹೇಮಾ ಪಾವನಿ ಹಾಜರಿದ್ದರು.

ಕನಕ ಜಯಂತಿಗೆ ಈಶ್ವರಪ್ಪಗೆ ಆಹ್ವಾನ ನೀಡದ್ದನ್ನು ಖಂಡಿಸಿ ಪ್ರತಿಭಟನೆ
ಶಿವಮೊಗ್ಗ: ಕನಕ ದಾಸರ ಜಯಂತಿ ಕಾರ್ಯಕ್ರಮಕ್ಕೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಪ್ರಸಂಗ ಕುವೆಂಪು ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟನೆಗೆ ಮುನ್ನ ರಂಗಮಂದಿರದೊಳಗೆ ಪ್ರತಿಭಟನೆ ನಡೆಸುತ್ತಾ ನುಗ್ಗಿದ ಕಾರ್ಯಕರ್ತರನ್ನು ಪೊಲೀಸರು ತಡೆದರು. ನಂತರ ಅವರನ್ನು ಬಂಧಿಸುವ ಉದ್ದೇಶದಿಂದ ಪೊಲೀಸರು ವಾಹನಗಳನ್ನೂ ತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ತಪ್ಪಾಗಿರುವುದು ಹೌದು. ಈಶ್ವರಪ್ಪ, ಶ್ರೀಕಾಂತ್ ಸಮಾಜದ ಮುಖಂಡರಾಗಿದ್ದು ಅವರನ್ನು ಆಹ್ವಾನಿಸದೇ ಇರುವುದು ಸರಿಯಲ್ಲ. ಮುಂದೆ ಹೀಗಾದಂತೆ ಕ್ರಮವಹಿಸುವುದೊಳಿತು ಎಂದು ಸಮಜಾಯಿಷಿ ನೀಡಿ ಪ್ರತಿಭಟನಾಕರರ ಮನವೊಲಿಸುವ ಪ್ರಯತ್ನ ಮಾಡಿದರು.
ಪ್ರತಿಭಟನೆ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯು ವಿವಿಧ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕನಕ ದಾಸ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಈಶ್ವರಪ್ಪ ಹಾಗೂ ಎಂ.ಶ್ರೀಕಾಂತ ಅವರ ಹೆಸರಿಲ್ಲ. ಸಮಾಜದ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಕಡೆಗಣಿಸಲಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿತ್ತು.
ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕರರು ಸಭೆಯ ಗಮನ ಸೆಳೆದರು. ಪ್ರತಿಭಟನೆಯಲ್ಲಿ ವೇದಿಕೆಯ ರಾಮಣ್ಣ, ಪಿ.ಪ್ರಕಾಶ್, ರುದ್ರೇಶ್, ಮೋಹನ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement