ಸಾಧು- ಸಂತರ ಜಾತಿಗಿಂತ ಆದರ್ಶ ಮುಖ್ಯವಾಗಲಿ
ಕ.ಪ್ರ.ವಾರ್ತೆ ಭದ್ರಾವತಿ ನ.20
ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳೇ ಮೂರ್ತಿವೆತ್ತಂತಿದ್ದ ಶ್ರೇಷ್ಠ ಸಂತ ಕನಕದಾಸರ ಜಯಂತಿ ಆಚರಣೆಯಲ್ಲಿ ಎಲ್ಲರೂ ಭೇದಭಾವ ಮರೆತು ಭಾಗವಹಿಸಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಬಿ.ಜಿ. ಧನಂಜಯ ಕರೆ ನೀಡಿದರು.
ಬುಧವಾರ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿಯು ತಾಲೂಕು ಆಡಳಿತ, ತಾಪಂ, ನಗರಸಭೆ, ಸಮಾಜ
ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಕನಕದಾಸರ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ, ಸಾಧು- ಸಂತರ ಜಾತಿಗಿಂತ ಅವರ ವಿಚಾರಗಳು ಮುಖ್ಯವಾಗಬೇಕೆಂದರು.
ಶಾಸಕ ಎಂ.ಜೆ. ಅಪ್ಪಾಜಿ ಮಾತನಾಡಿ, ಕನಕದಾಸರ ಶ್ರೇಷ್ಠತೆಯನ್ನು ಇಂತಹ ಸಮಾರಂಭಗಳಲ್ಲಿ ಭಾಗವಹಿಸಿ ಅರಿಯಬೇಕೆಂದರಲ್ಲದೆ ಎಲ್ಲರೂ ಸೌಹಾರ್ದದಿಂದ ಬದುಕಬೇಕೆಂದು ಕರೆ ನೀಡಿದರು.
ತಾಪಂ ಅಧ್ಯಕ್ಷೆ ಕೆ.ಎನ್. ಭುವನೇಶ್ವರಿ, ತಹಸೀಲ್ದಾರ್ ಸಿದ್ದಮಲ್ಲಪ್ಪ, ಪೌರಾಯುಕ್ತ ಬಿ.ಡಿ. ಬಸವರಾಜಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ. ಮಲ್ಲೇಶಪ್ಪ, ಡಿವೈಎಸ್ಪಿ ಸದಾನಂದ ಬಿ.ನಾಯಕ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕರಿಯಪ್ಪ, ತಾಪಂ ಸದಸ್ಯರಾದ ಪಾರ್ವತಿಬಾಯಿ, ಸೋಮ್ಲಿಬಾಯಿ, ಶ್ರೀನಿವಾಸ್, ನಗರಸಭಾ ಸದಸ್ಯರಾದ ಬದರಿನಾರಾಯಣ, ಶಿವರಾಜ್, ರಾಜು, ಗುಣಶೇಖರ್, ರಾಮಕೃಷ್ಣ, ಅನಿಲ್ಕುಮಾರ್, ಮಹಾದೇವಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭಕ್ಕೆ ಮುನ್ನ ಕನಕದಾಸರ ಭಾವಚಿತ್ರವನ್ನು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ತಾಪಂ ಆವರಣಕ್ಕೆ ಕೊಂಡೊಯ್ಯಲಾಯಿತು. ವಿವಿಧ ಜಾನಪದ ಕಲಾಮೇಳಗಳು, ಸಮವಸ್ತ್ರ ಧರಿಸಿದ ಶಾಲಾ ವಿದ್ಯಾರ್ಥಿಗಳು ಮೆರವಣಿಗೆಗೆ ರಂಗು ತಂದಿದ್ದರು.