ಹಿರಿಯರಲ್ಲಿ ದೇವರ ಅಸ್ತಿತ್ವ: ಸಚಿವ ಕಿಮ್ಮನೆ
ಹೊಸನಗರ: ದೇವರ ಅಸ್ತಿತ್ವದ ಬಗ್ಗೆ ತಿಳಿದಿಲ್ಲ. ಆ ಬಗ್ಗೆ ವಿಶ್ಲೇಷಿಸುವುದು ಇಲ್ಲ. ಆದರೆ ನಮ್ಮ ಹಿರಿಯರಿಗೆ ಮಾತ್ರ ಎಂದಿಗೂ ಗೌರವ ಸಲ್ಲಬೇಕು. ಅವರಲ್ಲೇ ದೇವರನ್ನು ನೋಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ತಾಲೂಕಿನ ಹೊಂಬುಜ ಮಠದಲ್ಲಿ ದೇವೇಂದ್ರ ಕೀರ್ತಿ ಭಟ್ಟಾರಕ ಶ್ರೀಯವರ ಪಟ್ಟಾಭಿಷೇಕದ ದ್ವಿತೀಯ ವರ್ಧಂತ್ಯುತ್ಸವ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮ ಸಮಾಜಕ್ಕಾಗಿ ಅನೇಕ ಕೊಡುಗೆ ನೀಡಿದ ಹಿರಿಯರನ್ನು ಗೌರವದಿಂದ ಕಾಣುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಹೊಂಬುಜ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಶ್ರೀ ಮಾತನಾಡಿ, ದಾರ್ಶನಿಕರ ತತ್ವ ನೀತಿ ಸಿದ್ಧಾಂತಗಳನ್ನು ಕೇವಲ ಜಾತಿ ವರ್ಗಕ್ಕೆ ಸೀಮಿತಗೊಳ್ಳುತ್ತಿರುವುದು ವಿಷಾದನೀಯ. ದಾರ್ಶನಿಕರು ಅನುಸರಿಸಿದ ನಡೆಯನ್ನು ವಿಶಾಲವಾಗಿ ತಿಳಿಯುವ ಪ್ರಯತ್ನ ಮಾಡಬೇಕಿದೆ ಎಂದರು.
ರು. 1ಕೋಟಿ ವೆಚ್ಚದಲ್ಲಿ 8 ವಸತಿ ಗೃಹ, 500 ಆಸನದ ಭೋಜನಶಾಲೆ ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದೆ ಎಂದರು. ಭಾರತೀಯ ಜೈನ ಮಿಲಲ್ ಕಾರ್ಯಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಮೂರ್ತಿ ಆರ್. ವಸಂತಕುಮಾರ್, ಜಿಪಂ ಸದಸ್ಯ ಕಲಗೋಡು ರತ್ನಾಕರ್, ಮಠದ ಪ್ರತಿನಿಧಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.