ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕನ್ನಡ: ವಿಷಾದ
ಶಿವಮೊಗ್ಗ: ಕನ್ನಡ ಭಾಷೆಗೆ ಎರಡುವರೆ ಸಾವಿರ ವರ್ಷದ ಇತಿಹಾಸವಿದೆ. ಈ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಚಾಲುಕ್ಯರು, ಗಂಗರು, ಕದಂಬರು, ರಾಷ್ಟ್ರಕೂಟರು ಸೇರಿದಂತೆ ಹಲವು ರಾಜಮನೆತನಗಳು ಉಳಿಸಿ ಬೆಳೆಸಿದಂತಹ ಅತ್ಯಂತ ಸರಳ ಭಾಷೆ ಇಂದು ಕರ್ನಾಟಕದಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಕಂಠ ಕೂಡಿಗೆ ವಿಷಾದಿಸಿದರು.
ರೋಟರಿ ಪೂರ್ವ ಹಾಗೂ ರೋಟರಿ ಪೂರ್ವ ವಿದ್ಯಾಸಂಸ್ಥೆ ಮತ್ತು ಇನ್ನರ್ ವ್ಹೀಲ್, ಇಂಟರ್ ಯಾಕ್ಟ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು, ದೇಶದಲ್ಲಿ ಕನ್ನಡಕ್ಕೆ ಬಂದಷ್ಟು ಜ್ಞಾನಪೀಠ ಪ್ರಶಸ್ತಿ ಬೇರೆ ಯಾವುದೇ ಭಾಷೆಗೆ ಬಂದಿಲ್ಲ. ಆದರೆ, ಇಂದು ಪರಭಾಷೆಯ ವ್ಯಾಮೋಹದಿಂದ ಕನ್ನಡವನ್ನು ಅಲ್ಲಗಳೆಯಲಾಗುತ್ತಿದೆ. ಕನ್ನಡದಲ್ಲಿ ಮಾತನಾಡಿದರೆ ಗೌರವ ಕಡಿಮೆಯಾಗುತ್ತದೆ ಎಂಬ ವಾತಾವರಣ ಸೃಷ್ಟಿಯಾಗಿದೆ ಎಂದರು.
ಸಿ.ನ್‌ಆರ್‌ರಾವ್ ಕನ್ನಡದ ಹೆಮ್ಮೆ: ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು, ಎಲ್ಲಿ ಕನ್ನಡ ಭಾಷೆಯನ್ನು ಬಳಸಲು ಸಾಧ್ಯವೋ ಅಲ್ಲಿ ತಪ್ಪದೇ ಕನ್ನಡವನ್ನು ಬಳಸಿ ಉಳಿಸುವಂತಹ ಪ್ರಯತ್ನ ಮಾಡಬೇಕು ಎಂದ ಅವರು, ಕರ್ನಾಟಕ ಎಂದರೆ ಕಪ್ಪು ಮಣ್ಣಿನ ಭೂಮಿ ಎತ್ತರವಾದ ಪ್ರದೇಶ ಎಂದರ್ಥ. ಈ ನಾಡಿನಲ್ಲಿ ಹುಟ್ಟಿ ದೇಶವೇ ತನ್ನತ್ತ ನೋಡುವಂತೆ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ಭಾರತರತ್ನ ಪ್ರಶಸ್ತಿಗೆ ಭಾಜನರಾದ ವಿಜ್ಞಾನಿ ಸಿ.ಎನ್.ಆರ್.ರಾವ್ ಕನ್ನಡದಲ್ಲಿ ಓದಿ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಪೂರ್ವ ವಿದ್ಯಾಸಂಸ್ಥೆಯ ಅಧ್ಯಕ್ಷ ವಿಜಯಕುಮಾರ್ ವಹಿಸಿದ್ದರು. ರೋಟರಿ ಪೂರ್ವ ಅಧ್ಯಕ್ಷ ಕೆ.ಎಸ್. ಪುರುಷೋತ್ತಮ್, ಇನ್ನರ್ ವೀಲ್ ಅಧ್ಯಕ್ಷೆ ಸುಜಯಪುರುಶೋತ್ತಮ್, ಕಾರ್ಯದರ್ಶಿ ಶ್ವೇತಾ ಅಶಿತ್, ರೋಟರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್, ಇಂಟರ್ ಯಾಕ್ಟ್ ಕ್ಲಬ್ ಅಧ್ಯಕ್ಷೆ ಅರ್ಪಿತ ಮತ್ತಿತರರು ಇದ್ದರು.