ಈಶ್ವರಿ ಜ್ಞಾನ ವಿಕಾಸ ಕೇಂದ್ರ ವಾರ್ಷಿಕೋತ್ಸವ
ಶಿರಾಳಕೊಪ್ಪ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಡೆಸುತ್ತಿರುವ ಕಾರ್ಯವು ಪ್ರತಿ ಗ್ರಾಮದ ಪ್ರತಿ ಮನೆ ತಲಪುತ್ತಿರುವುದರಿಂದ ಸರ್ಕಾರ ತಲೆ ತಗ್ಗಿಸುವಂತಾಗಿದೆ. ಸರ್ಕಾರದ ಕೈಯಿಂದ ಆಗದ ಕಾರ್ಯವನ್ನು ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಗ್ರಾಪಂ ಸದಸ್ಯ ರವಿ ಶಾನಭೋಗ ತಿಳಿಸಿದರು.
ಶಿರಾಳಕೊಪ್ಪ ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಲವಂತನಕೊಪ್ಪ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಈಶ್ವರಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಜಿಲ್ಲಾ ಹಿರಿಯ ಆರೋಗ್ಯ ಸಹಾಯಕ ವೀರಭದ್ರಪ್ಪ ಮಾತನಾಡಿ, ಮಹಿಳೆಯರ ಜ್ಞಾನ ಬೆಳವಣಿಗೆ ಆಗಬೇಕಾದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಕಾರ್ಯಕ್ರಮ ಮಾಡಿದಾಗ ಎಲ್ಲ ರಂಗಗಳ ಮಾಹಿತಿ ಮಹಿಳೆಯರಿಗೆ ದೊರಕುತ್ತದೆ ಎಂದರು.
ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ಯಶೋಧಮ್ಮ ಮಾತನಾಡಿದರು. ತಡಗಣಿ ಗ್ರಾಪಂ ಉಪಾಧ್ಯಕ್ಷೆ ರೇಣುಕಮ್ಮ, ಸಂಯೋಜಕಿ ಸುಧಾ, ಒಕ್ಕೂಟದ ಅಧ್ಯಕ್ಷೆ ಲತಾ ಇತರರು ಇದ್ದರು. ದೀಪಾ ಸ್ವಾಗತಿಸಿದರು. ಅನಸೂಯಮ್ಮ ವಂದಿಸಿದರು. ಸೌಂದರ್ಯ ನಿರೂಪಿಸಿದರು.