ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಪಿಎಂಸಿಯಲ್ಲಿ ರೈತ ಸಂಘ ಪ್ರತಿಭಟನೆ

Lingaraj Badiger
Updated On : 22 Nov 2013, 11:31 am

ಶಿವಮೊಗ್ಗ: ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಮಂಜುನಾಥಸ್ವಾಮಿ ಅರೆಕಾನೆಟ್ ಕಂಪನಿ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಂಡು, ಉನ್ನತ ಮಟ್ಟದ ತನಿಖೆ ನಡೆಸುವುಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಎಪಿಎಂಸಿ ಎದುರು ಪ್ರತಿಭಟನೆ ನಡೆಸಿದರು.
ಅರೆಕಾನೆಟ್ ಕಂಪನಿ ಮಾಲೀಕ, ರಮೇಶ ಎಂಬ ರೈತ ಮಂಡಿಗೆ ಮಾರಾಟಕ್ಕೆ ತಂದಿದ್ದ ಅಡಕೆಗೆ ಎ ಬಿಲ್ ಕೊಡದೇ, ಬಿ ಬಿಲ್ ನೀಡಿದ್ದಾರೆ. ಅದು ಕೂಡ ತಿದ್ದಿಕೊಟ್ಟಿದ್ದು, ಈ ಮೂಲಕ ಹಣ ಲಪಾಟಿಯಿಸಲು ಮುಂದಾಗಿದ್ದಾರೆ. ಈ ಸಂಬಂಧವಾಗಿ ಮಾಲೀಕನ ಮೇಲೆ ಎಪಿಎಂಸಿ ಅವರು ತನಿಖೆ ನಡೆಸಿ ಆತನ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆದರೆ, ರೈತನಿಗೆ ಬರಬೇಕಾದ ಹಣ ಮಾತ್ರ ಇದುವರೆಗೂ ಬಂದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ರೈತರಿಗೆ ವಂಚನೆ: ಎಪಿಎಂಸಿಯಲ್ಲಿ ದಲ್ಲಾಳಿಗಳು ಅತಿಯಾದ ಬಡ್ಡಿ ಹಾಕುವುದು, ಶೇ.2ರಷ್ಟು ಕಮಿಷನ್ ತೆಗೆದುಕೊಳ್ಳುವುದು. ರೈತರ ಲೆಕ್ಕ ಕೇಳಿದರೆ ಕೊಡದೆ, ದಲ್ಲಾಳಿಗಳು ಕೊಟ್ಟ ಹಣವನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಬಿಳಿ ಚೀಟಿ ನೀಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ರೈತ ಸಂಘ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಿರ್ಲಕ್ಷ್ಯ: ರೈತನಿಗೆ ದಲ್ಲಾಳಿ ಬದಲು ಎಪಿಎಂಸಿಯಿಂದಲೇ ಚೆಕ್ ಮುಖಾಂತರ ಹಣ ಕೊಡಬೇಕು. ಎಪಿಎಂಸಿ ಗೇಟ್‌ನಲ್ಲಿ ಮತ್ತು ಎಪಿಎಂಸಿಯಲ್ಲಿ ಮಾಲು ಬಂದಿದ್ದು, ಹೊರಗೆ ಹೋಗಿದ್ದಕ್ಕೆ ಹಾಗೂ ಹರಾಜು ಆದ ದಾಖಲೆ ಎಲ್ಲವೂ ಕಂಪ್ಯೂಟರೀಕರಣವಾಗಬೇಕು ಎಂದು ಈ ಹಿಂದೆ ಹಲವು ಬಾರಿ ಹೋರಾಟ ಮಾಡಿದ್ದೆವು. ಇದನ್ನು ಎಪಿಎಂಸಿ ಅಧಿಕಾರಿಗಳು ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಪಾದಿಸಿದರು.
ಮಂಜುನಾಥಸ್ವಾಮಿ ಅರೆಕಾನೆಟ್ ಕಂಪನಿ ಮಾಲೀಕ ಟೀಕಪ್ಪಗೌಡರನ್ನು ಕೂಡಲೇ ಬಂಧಿಸಬೇಕು ಹಾಗೂ ಕಂಪನಿಯ ಪರವಾನಗಿಯನ್ನು ಕೂಡಲೇ ರದ್ದು ಮಾಡಬೇಕು. ರೈತನಿಗೆ ತಕ್ಷಣ ಹಣ ಕೊಡಿಸಬೇಕು. ಮಂಡಿ ಮಾಲೀಕರಲ್ಲಿ ಕೆಲವರು ಎಪಿಎಂಸಿ ಮತ್ತು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದು, ಮೋಸ ಮಾಡಿದ ಮಂಡಿಗಳ ದಾಖಲೆ ವಶಪಡಿಸಿಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ವೈ.ಜಿ. ಮಲ್ಲಿಕಾರ್ಜುನ್, ಎನ್. ಶಿವಮೂರ್ತಿ, ಟಿ.ಎಂ. ಚಂದ್ರಪ್ಪ, ಈ.ಟಿ. ಜಗದೀಶ್, ಸತೀಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement