ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಕೃಷಿ ವಿಮಾ' ಅನುಷ್ಠಾನಕ್ಕೆ ಸೂಚನೆ

Lingaraj Badiger
Updated On : 22 Nov 2013, 11:25 am

ಕ.ಪ್ರ.ವಾರ್ತೆ, ಶಿವಮೊಗ್ಗ, ನ. 21
ಕೃಷಿ ಇಲಾಖೆಯು ಪ್ರಾಯೋಗಿಕವಾಗಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಈಗಾಗಲೇ ನಿಗದಿಪಡಿಸಲಾದ ಬೆಳೆಗಳು ಮತ್ತು ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಿದೆ.
ಹಿಂಗಾರು ಹಂಗಾಮಿನಲ್ಲಿ ಹೋಬಳಿ ಮಟ್ಟಕ್ಕೆ ಮುಸುಕಿನ ಜೋಳವನ್ನು (ನೀರಾವರಿ) ಶಿಕಾರಿಪುರ ತಾಲೂಕಿನ ಹೊಸೂರು ಹಾಗೂ ಉಡುಗಣಿ ಹೋಬಳಿ, ಹೆಸರು (ಮಳೆ ಆಶ್ರಿತ) ಸೊರಬ ತಾಲೂಕು ಜಡೆ ಹೋಬಳಿಗಳಲ್ಲಿ ಅಗ್ರಿಕಲ್ಚರ್ ಇನ್‌ಶ್ಯೂರೆನ್ಸ್ ಕಂಪನಿ ಆಫ್ ಇಂಡಿಯಾ ಸಂಸ್ಥೆಗೆ ಅನುಷ್ಠಾನಗೊಳಿಸಲು ಹಂಚಿಕೆ ಮಾಡಿ ಮಂಜೂರಾತಿ ನೀಡಲಾಗಿದೆ.
ಹಿಂಗಾರು ಹಂಗಾಮಿನಲ್ಲಿ ಗ್ರಾಪಂ ಮಟ್ಟಕ್ಕೆ ಸೂರ್ಯಕಾಂತಿ (ನೀರಾವರಿ) ಬೆಳೆಗೆ ಶಿಕಾರಿಪುರ ತಾಲೂಕಿನ ಮುದ್ದನಹಳ್ಳಿ ಹಾಗೂ ಬಗನಕಟ್ಟೆ ಗ್ರಾಪಂಗಳಿಗೆ, ಬೇಸಿಗೆ ಹಂಗಾಮಿಗೆ ಹೋಬಳಿ ಮಟ್ಟಕ್ಕೆ ಸೂರ್ಯಕಾಂತಿ(ನೀರಾವರಿ) ಶಿಕಾರಿಪುರ ತಾಲೂಕಿನ ಹೊಸೂರು, ಉಡುಗಣಿ ಮತ್ತು ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಹೋಬಳಿ ಗುರುತಿಸಲಾಗಿದೆ.
ಬೇಸಿಗೆ ಹಂಗಾಮಿಗೆ ಗ್ರಾಪಂ ಮಟ್ಟಕ್ಕೆ ಬತ್ತ- ನೀರಾವರಿ, ಭದ್ರಾವತಿ-31, ಶಿವಮೊಗ್ಗ-18, ಶಿಕಾರಿಪುರ-11, ಸೊರಬ-6 ಸೇರಿದಂತೆ ಒಟ್ಟು 66 ಗ್ರಾಪಂಗಳನ್ನು ಗುರುತಿಸಲಾಗಿದೆ.
ಹಿಂಗಾರು ಹಂಗಾಮಿಗೆ ಇಚ್ಛೆಯುಳ್ಳ ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಲು ಡಿ. 31 ಮತ್ತು ಬೇಸಿಗೆ ಹಂಗಾಮಿಗೆ 2014ರ ಫೆಬ್ರವರಿ 28 ಕೊನೆಯ ದಿನಾಂಕವಾಗಿರುತ್ತದೆ. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಶೀದಿ ನೀಡತಕ್ಕದ್ದು.
2013- 14ನೇ ಸಾಲಿನ ಹಿಂಗಾರು ಹಂಗಾಮಿಗೆ ಬೆಳೆ ಸಾಲ ಪಡೆದ ರೈತರು ಡಿ. 31ರೊಳಗೆ ಮತ್ತು ಬೇಸಿಗೆ ಹಂಗಾಮಿಗೆ ಜನವರಿ 1ರಿಂದ ಫೆಬ್ರವರಿ 28ರೊಳಗೆ ಬೆಳೆ ಸಾಲ ಮಂಜೂರಾಗಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ಕೃಷಿ ವಿಮಾ ಯೋಜನೆಗೆ ಒಳಪಡಿಸಲಾಗುವುದು.
ವಿಮಾ ಕಂತು: ವಾಣಿಜ್ಯ ವಿಮಾ ಕಂತಿನ ದರ ಹಾಗೂ ರೈತರು ಕಟ್ಟಬೇಕಾಗಿರುವ ವಿಮಾ ಕಂತಿನ ದರದಲ್ಲಿ ವ್ಯತ್ಯಾಸದ ಮೊಬಲಗಿನಲ್ಲಿ ಶೇ. 50ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸುವುದು.
2013- 14ನೇ ಸಾಲಿನ ಹಿಂಗಾರು ಹಂಗಾಮಿಗೆ ಪ್ರತಿ ಹೆಕ್ಟೇರ್‌ಗೆ ಮುಸುಕಿನ ಜೋಳ (ನೀರಾವರಿ) 722, ಹೆಸರು (ಮಳೆ ಆಶ್ರಿತ) 428 ಹಾಗೂ ಸೂರ್ಯಕಾಂತಿ (ನೀರಾವರಿ) 2148 ವಿಮಾ ಕಂತು ಪಾವತಿಸಬೇಕು.
2013- 14ನೇ ಸಾಲಿನ ಬೇಸಿಗೆ ಹಂಗಾಮಿಗೆ ಬತ್ತ (ನೀರಾವರಿ) 1094 ಹಾಗೂ ಸೂರ್ಯಕಾಂತಿ (ನೀರಾವರಿ) 1914 ಇರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಬಾಳೆಗೆ ಧನ ಸಹಾಯ
ಶಿವಮೊಗ್ಗ: ತೋಟಗಾರಿಕೆ ಇಲಾಖೆಯು 2013- 14ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬಾಳೆ ಬೆಳೆಯಲ್ಲಿ ನಿಖರ ಬೇಸಾಯ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳು ನಿಖರ ಬೇಸಾಯ ಪದ್ಧತಿಯಲ್ಲಿ ಬಾಳೆ ಬೆಳೆ ಬೆಳೆಯಲು ತಗಲುವ ಒಟ್ಟಾರೆ ವೆಚ್ಚದ ಶೇ. 50ರಷ್ಟನ್ನು, ಗರಿಷ್ಠ ಮಿತಿ ಪ್ರತಿ ಎಕರೆಗೆ 20 ಸಾವಿರ ಧನಸಹಾಯ ನೀಡಲಾಗುವುದು. ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಗರಿಷ್ಠ 2 ಎಕರೆ ಪ್ರದೇಶಕ್ಕೆ ಮಾತ್ರ ಸಹಾಯಧನ ವಿತರಿಸಲಾಗುವುದು. ರೈತರು ಅಂಗಾಂಶ ಬಾಳೆ ಸಸಿಗಳನ್ನು ಕಡ್ಡಾಯವಾಗಿ ಬೇಸಾಯಕ್ಕೆ ಬಳಸಿ, ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡು, ವೈಜ್ಞಾನಿಕ ಪರಿಕರಗಳ ಬಳಕೆ ಮಾಡಿ, ಹನಿ ನೀರಾವರಿ ಹಾಗೂ ರಸಾವರಿ ಪದ್ಧತಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ವಿವರಗಳಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ತಾಲೂಕು ತೋಟಗಾರಿಕೆ ಅಧಿಕಾರಿಯನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement