ರೈಲು ಮಾರ್ಗ ಸರ್ವೇಗೆ ಸಂಸದರ ಆಗ್ರಹ
ಶಿವಮೊಗ್ಗ: 2012- 13ನೇ ಸಾಲಿನ ಕೇಂದ್ರ ರೇಲ್ವೆ ಆಯವ್ಯಯದಲ್ಲಿ ಘೋಷಣೆಯಾದಂತೆ ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ಹೊಸ ರೇಲ್ವೆ ಮಾರ್ಗದ ಸರ್ವೆ ಕಾರ್ಯ ಕೂಡಲೇ ಕೈಗೆತ್ತಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ರೇಲ್ವೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗ- ಚಿಕ್ಕಮಗಳೂರಿಗೆ ನೇರ ರೇಲ್ವೆ ಸಂಪರ್ಕ ಕಲ್ಪಿಸಿದ ಹಿನ್ನೆಲೆಯಲ್ಲಿ ಕೇಂದ್ರ ರೇಲ್ವೆ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿರುವ ಸಂಸದರು, ನೆನೆಗುದಿಗೆ ಬಿದ್ದಿರುವ ರೇಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ನೇರ ರೈಲು ಸೌಲಭ್ಯ ಒದಗಿಸಿ ಮಲೆನಾಡಿನ ಜನರ ಶತಮಾನಗಳ ಕನಸನ್ನು ಈಡೇರಿಸಿರುವುದು ಸಂತಸ ತಂದಿದೆ. ಹಾಗೆಯೇ ವಿವಿಧ ಯೋಜನೆಗಳ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.
ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುವ ರೈಲು ಬೆಂಗಳೂರು ಸಿಟಿಯನ್ನು ಬೆಳಗಿನ ಜಾವ 4.30ಕ್ಕೆ ತಲುಪುತ್ತಿರುವುದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿರುವುದರಿಂದ, ಒಂದು ಗಂಟೆ ತಡವಾಗಿ ತಲುಪಬೇಕು.
2011- 12ನೇ ಸಾಲಿನ ಕೇಂದ್ರ ರೇಲ್ವೆ ಆಯವ್ಯಯದಲ್ಲಿ ಘೋಷಣೆಯಾದ ಶಿವಮೊಗ್ಗ- ಹರಿಹರ ಹೊಸ ಮಾರ್ಗವನ್ನು ಕೂಡಲೇ ಅಳವಡಿಸುವ ಕಾರ್ಯ ಕೈಗೆತ್ತಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು.
ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ರೇಲ್ವೆ ಬ್ಲಾಕ್ ನಿಲ್ದಾಣವಿದ್ದು, ಎಲ್ಲಾ ಮೂಲ ಸೌಕರ್ಯಗಳನ್ನೊಳಗೊಂಡಿರುವುದರಿಂದ, ಆ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ತಾಳಗುಪ್ಪ-ಮೈಸೂರು ಇಂಟರ್‌ಸಿಟಿ ಹಾಗೂ ತಾಳಗುಪ್ಪ- ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.