ಸರ್ಕಾರಿ ಅಭಿಯೋಜಕರ ನೇಮಕಕ್ಕೆ ಒತ್ತಾಯ
ಹೊಸನಗರ: ಪಟ್ಟಣದ ಮಾರಿಗುಡ್ಡದಲ್ಲಿರುವ ಮುನ್ಸಿಫ್ ನ್ಯಾಯಾಲಯದಲ್ಲಿ ಕಾಯಂ ಸಹಾಯಕ ಸರ್ಕಾರಿ ಅಭಿಯೋಜಕರಿಲ್ಲದ ಕಾರಣ ಬಡವರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ನೇಮಕ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.
ಗುರುವಾರ ಮಧ್ಯಾಹ್ನ ಈರುಳ್ಳಿ ಚೀಲದಿಂದ ತಯಾರಿಸಿದ ಮೇಲಂಗಿ ಧರಿಸಿ ಅದರ ಮೇಲೆ ಹೊಸನಗರ ನ್ಯಾಯಾಲಯಕ್ಕೆ ಎಪಿಪಿ ಬೇಕು ಎಂಬ ಭಿತ್ತಿಪತ್ರ ಅಂಟಿಸಿಕೊಂಡು ಹೋರಾಟಗಾರ್ತಿ ಮಲಾಲರ ಭಾವಚಿತ್ರ ಹಿಡಿದುಕೊಂಡು ಮುನ್ಸಿಫ್ ಮತ್ತು ಪ್ರಥಮದರ್ಜೆ ನ್ಯಾಯಾಲಯದ ಎದುರು ಸಂಜೆವರೆಗೂ ನಿಂತುಕೊಂಡೆ ಪ್ರತಿಭಟಿಸಿದರು. ಇದಕ್ಕೂ ಮುನ್ನ ರಿಪ್ಪನ್ಪೇಟೆಯಿಂದ ಹೊಸನಗರಕ್ಕೆ ಆಗಮಿಸಿದ ನಂತರ ಪಟ್ಟಣದ ಬೀದಿಯಲ್ಲಿ ಪಾದಯಾತ್ರೆ ನಡೆಸಿದರು. ನ್ಯಾಯಾಲಯಕ್ಕೆ ಕಾಯಂ ಸಹಾಯಕ ಸರ್ಕಾರಿ ಅಭಿಯೋಜಕರಿಲ್ಲದ ಕಾರಣ ಬಡವರಿಗೆ ತೊಂದರೆಯಾಗುತ್ತಿದೆ. ಪೊಲೀಸರಿಂದ ಬಂಧಿಸಲ್ಪಟ್ಟ ವ್ಯಕ್ತಿ ಜಾಮೀನು ಪಡೆಯಲಾರದೆ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದ ಅವರು, ಸರ್ಕಾರ ಮತ್ತು ರಾಜಕಾರಣಿಗಳಿಗೆ ಆದ್ಯತೆಗಳ ಅರಿವಿಲ್ಲ. ಇಲ್ಲಿನ ನ್ಯಾಯಾಧೀಶರ ವಸತಿ ಸಮುಚ್ಚಯಕ್ಕೆ ಕೋಟ್ಯಂತರ ರು. ವ್ಯಯಿಸಲಾಗಿದೆ. ಅದೇ ಅಗತ್ಯವಿರುವ ಸಿಬ್ಬಂದಿ ನೇಮಿಸಲು ಹಣವಿಲ್ಲವೆನ್ನುವ ನೆಪ ಹೇಳುತ್ತಾರೆ ಎಂದು ಆರೋಪಿಸಿದರು. ಇಂತಹ ಚಿಕ್ಕ ಸಮಸ್ಯೆಗಳಿಂದ ಬಡವರಿಗೆ ಮತ್ತು ಸಾಮಾನ್ಯ ಜನರಿಗಾಗುವ ತೊಂದರೆಯ ಬಗ್ಗೆ ಮಾತನಾಡಲು ಯಾರಿಗೂ ಸಮಯವಿಲ್ಲ. ನನ್ನ ಈ ಪ್ರತಿಭಟನೆಯಿಂದಾದರೂ ಸರ್ಕಾರ ಎಚ್ಚೆತ್ತು ಕೂಡಲೇ ಸಹಾಯಕ ಸರ್ಕಾರಿ ಅಭಿಯೋಜಕರನ್ನು ನೇಮಿಸಲಿ ಎಂದು ಆಗ್ರಹಿಸಿದರು. ವಿಶೇಷ ಮತ್ತು ವಿನೂತನ ಶೈಲಿಯ ಪ್ರತಿಭಟನೆಗೆ ಹೆಸರಾದ ಕೃಷ್ಣಪ್ಪ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಜನರಿಂದ 2 ಲೀಟರ್ ಪೆಟ್ರೋಲ್ಗೆ ದುಡ್ಡು ಬೇಕು. ಸರ್ಕಾರದಿಂದ ಹೊಸನಗರ ನ್ಯಾಯಾಲಯಕ್ಕೆ ಎಪಿಪಿ ಬೇಕು ಎಂಬ ಭಿತ್ತಿಪತ್ರ ಮೈಗೆ ಅಂಟಿಸಿಕೊಂಡ ಈ ಪ್ರತಿಭಟನೆಯ ಕೂಗು ಸರ್ಕಾರಕ್ಕೆ ಕೇಳುತ್ತದೆಯೊ ಎಂಬುದನ್ನು ಕಾದು ನೋಡಬೇಕು.
--
ಕುಂವಿವಿ ಇಂದು ವಿಚಾರ ಸಂಕಿರಣ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯವು ನಿರ್ವಹಣಾ ಅಧ್ಯಯನ ಮತ್ತು ಸಂಶೋಧನಾ ಘಟಕವು ನ. 22 ಮತ್ತು 23ರಂದು ಶಂಕರಘಟ್ಟ ಜ್ಞಾನ ಸಹ್ಯಾದ್ರಿಯ ಪ್ರೊ. ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ ಭಾರತೀಯ ಸಮಗ್ರ ವ್ಯವಸ್ಥೆ ನಿರ್ವಹಣೆ ಕುರಿತು 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿದೆ.
ನ. 22ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಆಗಮಿಸಲಿರುವರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಎ. ಬಾರಿ ಅವರು ಅಧ್ಯಕ್ಷತೆ ವಹಿಸುವರು.